ದೇಶ

ಪ್ರತಿಭಟನೆಗಷ್ಟೇ ಸೀಮಿತವಾದ ಭಾರತ್ ಬಂದ್: ಜನಜೀವನ ನಿರಾತಂಕ

ಬೆಂಗಳೂರು: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ “ಭಾರತ್‌ ಬಂದ್‌’ ನಡೆಯುತ್ತಿದ್ದು, ರೈತ ಸಂಘಟನೆಗಳು, ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ಆದರೆ ರಾಜ್ಯದಲ್ಲಿ ಜನರಿಂದ ಹೆಚ್ಚಿನ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿಲ್ಲ.

ಹೋಟೆಲ್‌ ಮಾಲಿಕರು, ಆಟೋ, ಓಲಾ-ಉಬರ್‌ ಚಾಲಕರು, ಮಾಲಿಕರು, ಲಾರಿ ಮಾಲಿಕರ ಸಂಘಗಳು ಸೇರಿ ಬಹುತೇಕ ಸಂಘಟನೆಗಳು ರೈತರ ಹೋರಾಟಕ್ಕೆ ನೈತಿಕ ಬೆಂಬಲವನ್ನಷ್ಟೇ ಸೂಚಿಸಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ರೈಲು, ಮೆಟ್ರೋ ಒಳಗೊಂಡಂತೆ ಎಲ್ಲ ಸಮೂಹ ಸಾರಿಗೆಗಳು ಕೂಡ ಎಂದಿನಂತೆ ಸಂಚರಿಸಲಿವೆ. ಹೀಗಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಬಸ್ ಗಳು ಎಂದಿನಂತೆ ಓಡಾಡುತ್ತಿದ್ದು, ಜನರ ಓಡಾಟವು ನಿರಾತಂಕವಾಗಿದೆ.

ಶಾಲಾ-ಕಾಲೇಜುಗಳ ಚಟುವಟಿಕೆಗಳು, ಹೋಟೆಲ್‌ಗಳು ಕೂಡ ಎಂದಿನಂತೆ ನಡೆಯುತ್ತಿದೆ. ಬಂದ್ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಅಕ್ಕಮಹಾದೇವಿ ವಿವಿ ಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಕರಾವವಳಿಯಲ್ಲಿ ನೀರಸ: ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಎಂದಿನಂತಿದ್ದು, ಜನರು ಕೂಡಾ ಎಂದಿನಂತೆ ಕೆಲಸಗಳಲ್ಲಿ ತೊಡಗಿದ್ದಾರೆ. ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ತೆರೆದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ವಾತಾವರಣ ಕಂಡು ಬಂದಿಲ್ಲ.

ಚಿತ್ರದುರ್ಗದಲ್ಲಿ ಮೋದಿ‌ ಭಾವಚಿತ್ರಕ್ಕೆ ಈರುಳ್ಳಿ ಹಾರ: ಸಂಯುಕ್ತ ರೈತ ಒಕ್ಕೂಟದಿಂದ ಕರೆಕೊಟ್ಟಿರುವ ಬಂದ್ ಕೋಟೆನಾಡು‌ ಚಿತ್ರದುರ್ಗದಲ್ಲಿ ಪ್ರತಿಭಟನೆ ಮೂಲಕ ಆರಂಭವಾಗಿದೆ. ನಗರದ ಗಾಂಧಿ ವೃತ್ತದಲ್ಲಿ ವಿವಿಧ ರೈತ,‌ ಕಾರ್ಮಿಕ ಮತ್ತಿತರೆ ಸಂಘಟನೆಗಳ ಮುಖಂಡರು‌ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ‌ ನಡುವೆ ರೈತ ಮುಖಂಡ ಲಿಂಗಾವರಹಟ್ಟಿ ಲಕ್ಷ್ಮೀಕಾಂತ್ ನೇತೃತ್ವದ ರೈತ ಸಂಘ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಈರುಳ್ಳಿಯಿಂದ ಮಾಡಿರುವ ಹಾರ ಹಾಕಿ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈರುಳ್ಳಿ ದರ‌ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ದನಿಯಾಗುತ್ತಿಲ್ಲ ಎಂದು ಗುಡುಗಿದರು.

ದಾವಣಗೆರೆ: ಭಾರತ್ ಬಂದ್ ಗೆ ಬೆಂಬಲವಾಗಿ ದಾವಣಗೆರೆಯಲ್ಲಿ ವಿವಿಧ ಸಂಘಟನೆಗಳು ಬಂದ್ ನಡೆಸುತ್ತಿವೆ. ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ದಾವಣಗೆರೆಯ ಮುಖ್ಯ ರಸ್ತೆ, ವೃತ್ತಗಳನ್ನು ಹೊರತುಪಡಿಸಿ ಇತರೆಡೆ ಬಂದ್ ಗೆ ಅಂತಹ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಎಂದಿನಂತೆ ಅಂಗಡಿ ತೆರೆದಿವೆ. ಆಟೋಗಳ ಸಂಚಾರ ಮಾಮೂಲಿನಂತೆ ಇದೆ. ಶಾಲಾ ಕಾಲೇಜುಗಳು ನಡೆಯುತ್ತಿವೆ.

Related Articles

Leave a Reply

Your email address will not be published. Required fields are marked *

Back to top button