ಪೊಲೀಸ್ ಹುತಾತ್ಮರ ದಿನಾಚರಣೆ : ಗೌರವ ಸಮರ್ಪಣೆ.
ಹಾಸನ : ದೇಶದೊಳಗಿನ ಕಾನೂನು ಸುವ್ಯವಸ್ಥೆ ಪಾಲನೆ, ನಾಗರೀಕರ ಆಸ್ತಿ ಪಾಸ್ತಿ ರಕ್ಷಣೆ, ಅಪರಾಧ ತಡೆ ಹೀಗೆ ಹತ್ತು ಹಲವಾರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಗೌರವ ಸಲ್ಲಿಸಿ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಭಾರತದ ನಾಗರೀಕರಲ್ಲಿ ದೇಶ ಪ್ರೇಮ ಉತ್ತೇಜಿಸಲು ಮತ್ತು ಭಾರತದ ಒಗ್ಗಟ್ಟಿನ ರಕ್ಷಣೆಗೆ ಕೊಡುಗೆ ನೀಡಲು, ಎಲ್ಲಾ ನಾಗರೀಕರಿಗೆ ಭಾರತೀಯ ಸಂವಿಧಾನದ ಅನುಚ್ಛೇದ ೫ಐಂ ರಡಿ ೧೧ ನೈತಿಕ ಹೊಣೆಗಾರಿಕೆ ನೀಡಲಾಗಿದ್ದು, ಈ ಹೊಣೆಗಾರಿಕೆಯ ಪಾಲನೆಯಲ್ಲಿ ಯಾರೊಬ್ಬ ತಪ್ಪೆಸಗದಂತೆ ನೋಡುವ ಗುರುತರವಾದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದರು.
ಇಂದಿನ ಸಮಾಜದಲ್ಲಿ ಜನ ತಮ್ಮ ತಮ್ಮೊಳಗೆ ಜಗಳ ಗುಂಪು ಗಲಭೆಗಳಲ್ಲಿ, ತೊಡಗಿ ಸಮಾಜದ ನೆಮ್ಮದಿ ಹಾಳು ಮಾಡುತ್ತಿದ್ದು, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಕಾಪಾಡುವ ಹೊಣೆ ನಿಮ್ಮ ಮೇಲೆ ಇದೆ, ಅದು ಅಲ್ಲದೆ ನಾಗರೀಕರು ಜವಾಬ್ದಾರಿ ಮರೆತು ತಪ್ಪುಗಳನ್ನು ಮಾಡಿ ಪೊಲೀಸ್ ಇಲಾಖೆಯನ್ನು ಗುರಿಯಾಗಿಸಿರುವುದು ಇದೆ ಎಂದರು.
ಪೊಲೀಸ್ ಅಧಿಕಾರಿಯಾಗಲು ವಿದ್ಯಾರ್ಹತೆ ಮಾತ್ರ ಸಾಲದು ಆತನಲ್ಲಿ. ಒಬ್ಬ ಸೈನಿಕ, ವೈದ್ಯ, ವಕೀಲ, ರಾಜತಾಂತ್ರಿಕ ಹಾಗೂ ಶಿಕ್ಷಕನ ಗುಣ ವಿಶೇಷತೆ ಇರಬೇಕು. ತಮ್ಮ ಬಂಧು ಬಳಗ, ಮನೆ ತೊರೆದು ದೇಶದ ಗಡಿ ಕಾಯುವ ವೀರಯೋಧರ ಸೇವೆಗೆ – ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವೆ ಸಮನಾಗಿದೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಕರ್ತವ್ಯ ಪಾಲನೆಯಲ್ಲಿ ಸದಾ ನಿರತರಾಗಿ ನಮ್ಮೆಲ್ಲರ ಸುರಕ್ಷತೆಗೆ ಶ್ರಮಿಸುವ ದೇಶದ ಭದ್ರತೆಗೆ ಹೋರಾಡಿ ಪ್ರಾಣ ತ್ಯಾಗ ಮಾಡಿ ಹುತಾತ್ಮರ ಶೌರ್ಯ, ಸಮರ್ಪಣೆ, ತ್ಯಾಗವನ್ನು ಸ್ಮರಿಸಿ ಗೌರವಿಸುವುದು ನಮ್ಮೆಲರ ಕರ್ತವ್ಯ, ಅಂಥಹ ಮಹಾನುಬಾವರನ್ನೆಲ್ಲ ಸ್ಮರಿಸುತ್ತಾ ಅವರ ಕುಟುಂಬಸ್ಥರಿಗೆ ವಂದಿಸಿದರು.
ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಮಗೆಲ್ಲರಿಗೂ ಭಾರತಾಂಬೆಯ ಸೇವೆ ಮಾಡಲು ಹೆಚ್ಚಿನ ಶಕ್ತಿ ದೊರಕಲಿ ಎಂದು ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಅವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿ ಗೌರವ ಸಮರ್ಪಣೆ ಮಾಡಿದ ನಂತರ ಮಾತನಾಡಿ ೧೯೫೯ ರಲ್ಲಿ ಸಿಯಾಚಿನ್ ಗಡಿಯಲ್ಲಿ ಕರ್ತವ್ಯದಲ್ಲಿದ್ಧ ಸಂದರ್ಭದಲ್ಲಿ ದಾಳಿಯಿಂದ ಮೃತಪಟ್ಟ ೧೧ ಜನರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಸುವುದರ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
೨೦೨೩ ರ ಸೆಪ್ಟೆಂಬರ್ ತಿಂಗಳಿನಿAದ ೨೦೨೪ ರ ಆಗಸ್ಟ್ ೩೧ ವರೆಗೆ ದೇಶದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದೇಶಕ್ಕಾಗಿ ತಮ್ಮ ಜೀವ ಅರ್ಪಣೆ ಮಾಡಿದ ಒಟ್ಟು ೨೧೩ ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಟ್ಟಿಯನ್ನು ಓದಿ ಸ್ಮರಿಸಿದರು.
ನಗರ ಸಭೆ ಅಧ್ಯಕ್ಷರಾದ ಚಂದ್ರೇಗೌಡ, ಹೆಚ್ಚಿವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಡಿ.ವೈ.ಎಸ್.ಪಿ.ಮುರುಳಿಧರ್, ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ :ಯತೀಶೆಟ್ಟಿಯಲ್ಲಿ ಹಾಸನ