ಕೋಲಾರ: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರಿಗೆ (Power Star Puneeth Rajkumar) ಪದ್ಮಶ್ರೀ ಪ್ರಶಸ್ತಿ (padma shri award) ನೀಡಬೇಕು ಎಂದು ನಿರ್ಮಾಪಕ ಹಾಗೂ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ (Minister Munirathna) ಆಗ್ರಹಿಸಿದ್ದಾರೆ. ಕೋಲಾರ ಜಿಲ್ಲೆಯ ಕೋಟಿಲಿಂಗ ದೇಗುಲದಲ್ಲಿ ಮಾತನಾಡಿದ ಅವರು, ನಮ್ಮ ಪುನೀತ್ ರಾಜ್‍ಕುಮಾರ್ ರಿಗೆ ಪ್ರಶಸ್ತಿ ಸಿಕ್ಕಲ್ಲಿ ಅದಕ್ಕಿಂತ ಖುಷಿ ಮತ್ತೊಂದಿಲ್ಲ ನನಗೆ ಎಂದರು. ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಅಲ್ಲದೆ, ಸಮಾಜಮುಖಿ ಸೇವೆಯಲ್ಲಿ ನಟ ಪುನೀತ್ ಕಾರ್ಯ ಶ್ಲಾಘನೀಯ ಎಂದು ಕೊಂಡಾಡಿದರು, ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲೇಬೇಕೆಂಬ ಆಗ್ರಹ ನನ್ನದು, ಸರ್ಕಾರಕ್ಕೂ ಒತ್ತಾಯ ಮಾಡುವೆ ಎಂದು ತಿಳಿಸಿದರು.
ಕೇದಾರನಾಥ ದೇಗುಲದಲ್ಲಿ ಶಂಕರಾಚಾರ್ಯರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆ ಕೋಲಾರದ ಕೋಟಿಲಿಂಗ ಶಿವನ ಕ್ಷೇತ್ರದಲ್ಲಿ ನೇರಪ್ರಸಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಗುಲ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ, ಮಾಜಿ ಶಾಸಕ ವೈ ಸಂಪಂಗಿ, ಬಿಜೆಪಿ ನಾಯಕರು, ಕಾರ್ಯಕರ್ತರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
ಮೋದಿಯವರ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್,ಇ,ಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನ ಸಾವಿರಕ್ಕೂ ಅಧಿಕ ಜನರು ಏಕ ಕಾಲದಲ್ಲಿ ವೀಕ್ಷಿಸಿದರು. ಇನ್ನು ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆ ಲೋಕಲ್ಯಾಣಕ್ಕಾಗಿ ಕೋಟಿಲಿಂಗ ದೇಗುಲದಲ್ಲಿ ವಿಶೇಷ ಅಭಿಷೇಕ, ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ನಂತರ ಮಾತನಾಡಿದ ಸಚಿವ ಮುನಿರತ್ನ ಪ್ರಧಾನಿ ಮೋದಿಯವರು ಭಾರತ ದೇಶದ ಸಂಸ್ಕೃತಿಯನ್ನ ಉಳಿಸಿ ಬೆಳೆಸುವ ಕಾರ್ಯಕ್ರಮ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.