ಇತ್ತೀಚಿನ ಸುದ್ದಿರಾಜ್ಯ
ಪುನೀತ್ ಜನ್ಮದಿನ ಸ್ಫೂರ್ತಿ ದಿನವಾಗಿ ಆಚರಣೆ: ಸಿಎಂ ಬೊಮ್ಮಾಯಿ ಘೋಷಣೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು (ಮಾರ್ಚ್ 17) ಸ್ಪೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ, ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್, ಪುನೀತ್ ದಿನಾಚರಣೆಯನ್ನು ಸ್ಫೂರ್ತಿ ದಿನವಾಗಿ ಆಚರಣೆ ಮಾಡಬೇಕೆಂಬುದು ಸೇರಿದಂತೆ ಮಾಡಿದ ಮನವಿಗಳಿಗೆ ಸ್ಪಂದಿಸಿದ ಅವರು ಈ ಭರವಸೆ ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ನಾಡಿನ ಕೋಟ್ಯಂತರ ಯುವಕರಿಗೆ ಅವರು ಸ್ಪೂರ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಹೇಳಿದರು.