ರಾಜ್ಯ

ಪುತ್ತೂರಿನಲ್ಲಿ ಕೈಗಾರಿಕಾ ಕಾರಿಡಾರ್ ರಚನೆಗೆ ಸಿದ್ಧತೆ!

ಪುತ್ತೂರು (Puttur) ಶಾಸಕ ಸಂಜೀವ ಮಠಂದೂರು (MLA Sanjeeva Matandoor) ಅವರ ನೇತೃತ್ವದಲ್ಲಿ ಪುತ್ತೂರಿನ ಸಾವಿರಾರು ಯುವಕ- ಯುವತಿಯರಿಗೆ ಉದ್ಯೋಗ ನೀಡುವ ಉದ್ದೇಶ ಮತ್ತು ಕೈಗಾರಿಕಾಭಿವೃದ್ಧಿಗಾಗಿ ಪುತ್ತೂರಿನಲ್ಲಿ ಬೃಹತ್ ಕೈಗಾರಿಕಾ ಕಾರಿಡಾರ್ (Industrial Corridor) ನಿರ್ಮಾಣ ಆಗಲಿದೆ. ಪ್ರತಿಷ್ಠಿತ ಉದ್ಯಮಗಳಿಂದ ಕೈಗಾರಿಕಾ ಸ್ಥಾಪನೆಗೆ ಚಿಂತನೆಯು ನಡೆದಿದ್ದು, ಇದಕ್ಕಾಗಿ ಚಿಕ್ಕಮುಡ್ನೂರು ಗ್ರಾಮದ ಕಟಾರ ಎಂಬಲ್ಲಿ 100 ಎಕರೆ ಜಮೀನನ್ನು ಗುರುತಿಸಿದ್ದು ಅದರ ಸರ್ವೆ ಕಾರ್ಯ ಅತೀ ಶೀಘ್ರದಲ್ಲಿ ನಡೆಯಲಿದೆ. ಕೈಗಾರಿಕಾ ಕಾರಿಡಾರ್ ಅನುಷ್ಠಾನದ ಹೊಣೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಹಿಸಿಕೊಳ್ಳಲಿದೆ.

ಪುತ್ತೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಅವಕಾಶ

ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಪ್ರತಿಷ್ಠಿತ ಉದ್ಯಮಗಳು ಪುತ್ತೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ.ಈ ಮೂಲಕ ಪುತ್ತೂರಿನ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಸಿಗುವ ನಿರೀಕ್ಷೆ ಹೊಂದಲಾಗಿದೆ.  ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಭೂಸ್ವಾಧೀನ ವಿಭಾಗದ ಭೂಸ್ವಾಧೀನ ಅಧಿಕಾರಿ ಬಿನೋಯ್‌ರವರು ಡಿಸೆಂಬರ್ 4 ರಂದು ಪುತ್ತೂರಿಗೆ ಭೇಟಿ ನೀಡಿದ್ದು,  ಶಾಸಕ ಸಂಜೀವ ಮಠಂದೂರು ಜತೆ ಸಮಾಲೋಚನೆಯನ್ನು ಈಗಾಗಲೇ ನಡೆಸಿದ್ದಾರೆ. ತಹಸೀಲ್ದಾರ್ ರಮೇಶ್ ಬಾಬು, ವಲಯ ಅರಣ್ಯ ಅಧಿಕಾರಿ ಬಿ.ಎಂ.ಕಿರಣ್, ಎಡಿಎಲ್‌ಆರ್ ರಮಾದೇವಿ ಮತ್ತಿತರ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

100 ಎಕರೆ ಜಮೀನು ಸ್ವಾಧೀನ

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕಟಾರ ಎಂಬಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಲಿದೆ.ಇದಕ್ಕಾಗಿ 100 ಎಕರೆ ಜಮೀನು ಗುರುತಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ವೆ ಕಾರ್ಯ ನಡೆಯಲಿದೆ.ಈ ಜಮೀನಿನಲ್ಲಿ ಸರಕಾರಿ ಜಾಗದ ಲಭ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತದೆ.ಖಾಸಗಿ ಜಮೀನು, ಅರಣ್ಯ ಜಮೀನು ಇದೆಯೇ ಎಂಬುದನ್ನೂ ಸಮೀಕ್ಷೆ ಮಾಡಲಾಗುತ್ತದೆ. 100 ಎಕರೆ ಜಮೀನು ಸ್ವಾಧೀನಪಡಿಸಿಕೊಂಡರೆ ಮೂಲಸೌಕರ್ಯಕ್ಕೆ ಅದರಲ್ಲಿ ಒಂದಷ್ಟು ಜಮೀನು ಹೋಗುತ್ತದೆ.ಉಳಿದುದನ್ನು ಸೈಟ್ ಮಾಡಿ ಹಂಚಲು ಸಾಧ್ಯವಾಗುತ್ತದೆ ಎಂದು ಬಿನೋಯ್ ಮಾಹಿತಿ ನೀಡಿದ್ದಾರೆ.ತಾಲೂಕಿನ ಇತರ ಕಡೆ ಕೂಡ ಜಮೀನು ಪರಿಶೀಲಿಸಲಾಗಿದೆ.ಆದರೆ ಕಟಾರದ ಜಮೀನು ಸಮೀಪ ಕುಮಾರಧಾರಾ ನದಿ ಇರುವ ಕಾರಣ ನೀರಿನ ಆಶ್ರಯ ಸುಲಭ.ಈ ಕಾರಣಕ್ಕೆ ಇದನ್ನು ಆಯ್ಕೆ ಮಾಡಲಾಗಿದೆ ಎಂದರು.

ಜಗದೀಶ್ ಶೆಟ್ಟರ್ ಸಚಿವರಾಗಿದ್ದಾಗ ಪುತ್ತೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದೆ.ಹಾಲಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.ಅವರು ಒಪ್ಪಿಗೆ ನೀಡಿದ ಮೇಲೆಯೇ ಭೂಸ್ವಾಧೀನಾಧಿಕಾರಿ ಪುತ್ತೂರಿಗೆ ಬಂದಿದ್ದಾರೆ.ಕೆಲವೇ ದಿನಗಳಲ್ಲಿ ಸರ್ವೆ ಕಾರ್ಯ ನಡೆಯಲಿದೆ. 10 ದಿನಗಳ ನಂತರ ಇನ್ನೊಂದು ಸಭೆ ನಡೆಯಲಿದೆ. ಕೆಐಎಡಿಬಿಯು ಜಮೀನು ಸ್ವಾಧೀನಕ್ಕೆ ಪಡೆದುಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತದೆ.

ದಕ್ಷಿಣ ಕನ್ನಡ ಮೂಲದ ಕೈಗಾರಿಕೋದ್ಯಮಿಗಳಿಗೆ ಆದ್ಯತೆ 

ದಕ್ಷಿಣ ಕನ್ನಡ ಮೂಲದ ಕೈಗಾರಿಕೋದ್ಯಮಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಂದ ಪುತ್ತೂರಿನ ಜನರಿಗೆ ಉದ್ಯೋಗ ಸಿಗಲಿದೆ. ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ 5 ಎಕರೆ ಮತ್ತು ಆರ್ಯಾಪು ಗ್ರಾಮದಲ್ಲಿ 15 ಎಕರೆ ಸ್ಥಳಗಳನ್ನು ಗುರುತಿಸಿ ಸರ್ವೆ ನಡೆಸಲಾಗಿದೆ. ಇಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಸಂಬಂಧ ಕೈಗಾರಿಕಾ ಪ್ರಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಮಾಹಿತಿ ನೀಡಿದ್ದಾರೆ.

ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ (Areca Nut Growers) ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಬಂದರು-ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ (Minister S Angara) ಭರವಸೆ ನೀಡಿದ್ದಾರೆ.ಹಳದಿ ರೋಗಕ್ಕೆ ಸಂಬಂಧಿಸಿದಂತೆ ಮುಂದಿನ 10 ದಿನಗಳ ಒಳಗಾಗಿ ತೋಟಗಾರಿಕಾ ಸಚಿವರೇ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ ಎಂದ ಅವರು ಹಳದಿ ರೋಗದಿಂದ ಕಂಗೆಟ್ಟ ಕೃಷಿಕರಿಗೆ ಪರ್ಯಾಯ ಕೃಷಿಯನ್ನೂ ಪರಿಚಯಿಸುವ ಕಾರ್ಯವನ್ನು ಮೀನುಗಾರಿಕೆ,ಒಳನಾಡು ಸಾರಿಗೆ ಇಲಾಖೆಯ ಮೂಲಕ ಮಾಡಲಾಗುವುದು ಎಂದರು. ಅಡಿಕೆ ಬೆಳೆಗೆ ಬದಲಿ ಕೃಷಿಯ ಅನಿವಾರ್ಯತೆಯೂ ಇದ್ದು, ಈ‌ ನಿಟ್ಟಿನಲ್ಲಿ ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ ಎಂದರು. ಜಿಲ್ಲೆಯ ಮೀನಿನ ತಳಿಗಳಾದ ಮಡಂಜಿ ಸೇರಿದಂತೆ ವಿವಿಧ ತಳಿಗಳ ಅಭಿವೃದ್ಧಿಗೆ ಪೂರಲ ವ್ಯವಸ್ಥೆಯನ್ನು ಮಾಡುವ ಜೊತೆಗೆ ವಿವಿಧ ತಳಿಯ ಮೀನು ಸಾಕಾಣಿಕೆಗೂ ವಿಶೇಷ ಒತ್ತು ನೀಡಲಾಗಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button