ಪಿಎಸ್ಐ ನೇಮಕಾತಿ ಅಕ್ರಮ: 9ನೇ ರ್‍ಯಾಂಕ್ ಅಭ್ಯರ್ಥಿ ದರ್ಶನ್ ಗೌಡ ಅರೆಸ್ಟ್
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೆಸರು ಪ್ರಸ್ತಾಪಿಸಿದ್ದ ಮಾಗಡಿ ಮೂಲದ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೌಡ ಜತೆಗೆ ಇತರೆ ಇಬ್ಬರು ಪಿಎಸ್ಐ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ದರ್ಶನ್ ಗೌಡನನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ ದರ್ಶನ್ ಗೌಡನನ್ನು ಬಂಧಿಸಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ. ರಾಮನಗರ ಮೂಲದ ಮತ್ತೊಬ್ಬ ಅರೋಪಿ ಹರೀಶ್ ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮೂವರು ಅರೋಪಿಗಳ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದ ದರ್ಶನ್ ಗೌಡನನ್ನು ಅರಂಭದಲ್ಲಿಯೇ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಮತ್ತು ಅವರ ಸಹೋದರ ಸತೀಶ್ ಅವರ ಹೆಸರು ದರ್ಶನ್ ಗೌಡ ಪ್ರಸ್ತಾಪಿಸಿದ್ದ. ಈ ವೇಳೆ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ವಿಚಾರಣೆ ಮಧ್ಯದಲ್ಲಿಯೆ ಬಿಟ್ಟು ಕಳಿಸಿದ ಅರೋಪ ಕೇಳಿ ಬಂದಿತ್ತು.
ಈ ವಿಚಾರ ಮುಂದಿಟ್ಟುಕೊಂಡೇ ಕಾಂಗ್ರೆಸ್ ನಾಯಕರು ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಅವರ ಸಹೋದರ ಸತೀಶ್ ಮೇಲೆ ಗಂಭೀರ ಆರೋಪ ಮಾಡಿದ್ದರು. ಅಶ್ವತ್ಥ್ ನಾರಾಯಣ ಸ್ಪಷ್ಟನೆ ನೀಡಿ ನಾನು ಇದರಲ್ಲಿ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಇನ್ನು ನೂರು ನಾಯಕರು ಒಂದಾದ್ರೂ ನನ್ನ ಹೆಸರಿಗೆ ಮಸಿ ಬಳಿಯಲು ಸಾಧ್ಯವಿಲ್ಲ. ತಿಹಾರ್ ಜೈಲಿಗೆ ಹೋಗಿ ಬರುವಂತಹ ಅಪರಾಧ ಮಾಡಿದವರು ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಶ್ವತ್ಥ್ ನಾರಾಯಣ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ಅರೋಪಿ ತಂದೆ ದರ್ಶನ್ ಗೌಡ ಅವರ ತಂದೆ ಕೂಡ ಸ್ಪಷ್ಟನೆ ನೀಡಿದ್ದರು. ನನ್ನ ಪುತ್ರ ಶ್ರಮ ವಹಿಸಿ ಪರೀಕ್ಷೆ ಬರೆದು ಪಾಸಾಗಿದ್ದಾನೆ ಎಂದು ಹೇಳಿದ್ದರು.
ದರ್ಶನ್ ಗೌಡ ಬಂಧನ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಪತ್ರಿಕೆಯಲ್ಲಿ ಕೇವಲ 19 ಅಂಕ ಎರಡನೇ ಪತ್ರಿಕೆಯಲ್ಲಿ 141 ಅಂಕ ಗಳಿಸುವ ಮೂಲಕ ರಾಜ್ಯದ 9 ನೇ ರ್‍ಯಾಂಕ್ ಗಳಿಸಿದ್ದ ಮಾಗಡಿ ಮೂಲದ ದರ್ಶನ್ ಗೌಡ ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ಎಸಗಿರುವುದು ಕಂಡು ಬಂದ ಬೆನ್ನಲ್ಲೇ ಭಾನುವಾರ ಕುಣಿಗಲ್ ಸಮೀಪ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಬಂಧನಕ್ಕೆ ಒಳಪಡಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ದರ್ಶನ್ ಗೌಡ ವಿಚಾರಣೆ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್ ಹೆಸರು ಹೇಳಿದ್ದ ಎನ್ನಲಾಗಿತ್ತು. 80 ಲಕ್ಷ ರೂ.ಗಳನ್ನು ಪಿಎಸ್ಐ ಹುದ್ದೆಗೆ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಈ ವಿಷಯ ತಿಳಿದ ಕೂಡಲೇ ಉನ್ನತ ಶಿಕ್ಷಣ ಸಚಿವರು ಸಿಐಡಿ ಪೊಲೀಸರಿಗೆ ಕರೆ ಮಾಡಿದ್ದರು. ಕರೆ ಹಿನ್ನೆಲೆಯಲ್ಲಿ ದರ್ಶನ್ ಗೌಡನನ್ನು ರಾತ್ರೋರಾತ್ರಿ ಬಿಟ್ಟು ಕಳಿಸಿದ ಆರೋಪ ಕೇಳಿ ಬಂದಿತ್ತು. ಇದೀಗ ದರ್ಶನ್ ಗೌಡ ಬಂಧನಕ್ಕೆ ಒಳಗಾಗಿದ್ದು ಸತೀಶ್ ಅವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.