ಪಿಎಸ್ಐ ನೇಮಕಾತಿ ಅಕ್ರಮ: ಬೊಮ್ಮಾಯಿ ಸರ್ಕಾರಕ್ಕೆ ಶಾಕ್ ಕೊಟ್ಟ ಸಿಐಡಿ
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸ್ಫೋಟಕ ಬೆಳವಣಿಗೆ ಆಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಕಾರ್ಯದರ್ಶಿ ಎನ್ನಲಾದ ಗಣಪತಿ ಭಟ್ರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಪಿಎಸ್ಐ ಅಕ್ರಮದಲ್ಲಿ ಗಣಪತಿ ಭಟ್ ಶಾಮೀಲಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ.
ಗಣಪತಿ ಭಟ್ ಮೇಲೆ ಈ ಹಿಂದೆಯೇ ಆರೋಪ ಕೇಳಿ ಬಂದಿತ್ತಾದರೂ ಸಾಕ್ಷಾಧಾರಗಳಿಗಾಗಿ ಸಿಐಡಿ ಅಧಿಕಾರಿಗಳು ಶೋಧ ನಡೆಸುತ್ತಗಿದ್ದರು. ಸಾಕ್ಷಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಗಣಪತಿ ಭಟ್ ವಶಕ್ಕೆ ಪಡೆದು ಬೆಳಗಿನಿಂದಲೂ ಪ್ರಶ್ನೆ ಮಾಡಲಾಗುತ್ತಿದೆ.
ಈ ಬೆಳವಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮುಜುಗರಕ್ಕೀಡುಮಾಡುವ ಸ್ಥಿತಿ ನಿರ್ಮಾಣ ಮಾಡಿದೆ.
ಗೃಹ ಸಚಿವರ ಸ್ಪಷ್ಟನೆ; ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಪಿಎಸ್ಐ ಅಕ್ರಮದಲ್ಲಿ ವಿಚಾರಣೆಗೆ ಒಳಪಟ್ಟಿರುವ ಶಿರಸಿ ಮೂಲದ ಗಣಪತಿ ಭಟ್ ಅವರು ಗೃಹ ಸಚಿವರ ಕಾರ್ಯಾಲಯದ ಸಿಬ್ಬಂದಿಯಲ್ಲ.
ಆದರೆ, ಗೃಹ ಇಲಾಖೆ ವಲಯದಲ್ಲಿ ಗಣಪತಿ ಭಟ್ ಹಲವು ಕೆಲಸ ನಿರ್ವಹಿಸುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.
ಯಾರೀ ಗಣಪತಿ ಭಟ್?: ಉತ್ತರ ಕನ್ನಡ ಜಿಲ್ಲೆಯ ಆರ್ಎಸ್ಎಸ್ ವಲಯದಲ್ಲಿ ಗುರುತಿಸಿಕೊಂಡಿದ್ದ ಗಣಪತಿ ಭಟ್ ಅವರ ಭಾಷಣ ಭಾರೀ ಸದ್ದು ಮಾಡುತ್ತಿತ್ತು. ಭಟ್ ಅವರ ಪ್ರತಿಮೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಸಂಪರ್ಕಕ್ಕೆ ನಾಂದಿ ಹಾಡಿತ್ತು. ಈ ಸಂಬಂಧ ಗಣಪತಿ ಭಟ್ ಅಧಿಕೃತವಾಗಿ ಪಕ್ಷದ ಚಟುವಟಿಕೆಯಲ್ಲಿ ಪಾಳ್ಗೊಳ್ಳುವ ಅವಕಾಶ ಸೃಷ್ಟಿಸಿತ್ತು
ಬಿ. ಎಸ್. ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ನೇಮಕಗೊಂಡರು. ಈ ವೇಳೆ ಅನಿರೀಕ್ಷಿತವಾಗಿ ಗೃಹ ಸಚಿವರಾಗಿ ಆಯ್ಕೆಯಾದ ಆರಗ ಜ್ಞಾನೇಂದ್ರ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಪಕ್ಷದ ವತಿಯಿಂದಲೇ ನೇಮಿಸಲಾಗಿತ್ತು ಎನ್ನುವ ಸುದ್ದಿ ಇದೆ.
ಗೃಹ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರೂ ಗಣಪತಿ ಭಟ್ ಬಹುತೇಕ ಸ್ವತಂತ್ರ್ಯವಾಗಿ ಗೃಹ ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದರು ಎಂಬ ಮಾತುಗಳು ಇದೀಗ ಬಿಜೆಪಿ ಪಕ್ಷದ ವಲಯದಲ್ಲಿಯೇ ಕೇಳಿ ಬರುತ್ತಿವೆ. ಪಕ್ಷದ ವತಿಯಿಂದ ಪಿಎ ಅವರನ್ನು ನೇಮಕ ಮಾಡಿದ್ದ ಬಗ್ಗೆ ಗೃಹ ಸಚಿವರು ಬೇಸರಗೊಂಡಿದ್ದರೂ, ಎಂದೂ ಅವರು ಆ ಅಸಮಧಾನ ತೋಡಿಕೊಂಡಿರಲಿಲ್ಲ ಎಂಬುದು ಉನ್ನತ ಮೂಲಗಳ ಮಾಹಿತಿ.
ಶಿರಸಿ ಮೂಲದ ಣಪತಿ ಭಟ್ರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಸಂಜೆ ವೇಳೆಗೆ ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಹಲವು ಅಭ್ಯರ್ಥಿಗಳಿಗೆ ಪಿಎಸ್ಐ ಹುದ್ದೆ ನೀಡುವುದಾಗಿ ಭರವಸೆ ನೀಡಿ ನೆರವು ನೀಡಿರುವ ಆರೋಪ ಗಣಪತಿ ಮೇಲೆ ಬಂದಿದೆ. ಗೃಹ ಸಚಿವರ ಹೆಸರು ದುರ್ಬಳಕೆ ಮಾಡಿಕೊಂಡು ಈ ಅಕ್ರಮ ಎಸಗಿದರೇ ಎಂಬುದು ಇನ್ನಷ್ಟೆ ಬೆಳಕಿಗೆ ಬರಬೇಕಿದೆ.