ಪಿಎಫ್ಐಗೆ ಕೇಂದ್ರದ ಅಂಕುಶ.. ನಿಷೇಧಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು PFI (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳಿಗೆ ಅಂಕುಶ ಹಾಕಿದೆ. ಈ ಸಂಘಟನೆಗಳು ಕಾನೂನುಬಾಹಿರ ಎಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಹೌದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಗೆ ಕೇಂದ್ರ ಸರ್ಕಾರ ಅಂಕುಶ ಹಾಕಿದೆ. ಐದು ವರ್ಷಗಳ ಕಾಲ ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಪಿಎಫ್ಐ ಸಂಘಟನೆ ಮೇಲೆ ಇತ್ತೀಚೆಗೆ ಕೇಂದ್ರೀಯ ತನಿಖಾ ಸಂಸ್ಥೆ (ಎನ್ಐಎ) ದೇಶಾದ್ಯಂತ ದಾಳಿ ಮಾಡಿತ್ತು. ಈ ವೇಳೆ ನೂರಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು. ಕರ್ನಾಟಕ ಸೇರಿದಂತೆ ದೇಶದ 93 ಸ್ಥಳಗಳಲ್ಲಿ ಎನ್ಐಎ ಈ ಕಾರ್ಯಾಚರಣೆ ಕೈಗೊಂಡಿತ್ತು.
ಎನ್ಐಎ ದಾಳಿ ಬೆನ್ನಲ್ಲೇ ಮಂಗಳವಾರ ಕರ್ನಾಟಕ, ಅಸ್ಸೋಂ, ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 80ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಮತ್ತು ಗಲಭೆ, ದೊಂಬಿ ಸೇರಿದಂತೆ ಪ್ರಚೋದನಕಾರಿ ಕೃತ್ಯದ ಆರೋಪದಡಿ ರಾಜ್ಯದಲ್ಲಿ ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದಿರುವ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ಕುಮಾರ್ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದರು.