
ಪಹಲ್ಗಾಮ್ (Pahalgam) ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ಭಾರತೀಯರಿಂದ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ಒತ್ತಾಯ ಸಾಮಾನ್ಯ ನಾಗರೀಕರಿಂದ ಕೇಳಿ ಬರುತ್ತಿದೆ. ಪಾಕಿಸ್ತಾನದ ವಿರುದ್ಧ ಸಂಘಟಿತ ಆಕ್ರೋಶ ವ್ಯಕ್ತವಾಗುತ್ತಿದೆ, ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ‘ಅಬಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಅದರ ಬೆನ್ನಲ್ಲೆ ಇದೀಗ ಭಾರತದ ಮತ್ತೊಂದು ಹೊಸ ಸಿನಿಮಾದಿಂದ ಪಾಕಿಸ್ತಾನಿ ನಟಿಯನ್ನು ಹೊರಗಿಡಲಾಗಿದೆ.ದಿಲ್ಜಿತ್ ದುಸ್ಸಾಂಜ್ ನಟನೆಯ ‘ಸರ್ದಾರ್ ಜಿ 3’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿದ್ದು. ‘ಸರ್ದಾರ್ ಜಿ 3’ ಸಿನಿಮಾನಲ್ಲಿ ಪಾಕಿಸ್ತಾನಿ ಖ್ಯಾತ ನಟಿ, ಗಾಯಕಿ ಹಾನಿಯಾ ಆಮಿರ್ ಅವರು ನಾಯಕಿಯಾಗಿ ನಟಿಸಲಿದ್ದರು. ಕೆಲ ಮೂಲಗಳ ಪ್ರಕಾರ ಈ ಬಗ್ಗೆ ಮಾತುಕತೆಯೂ ಸಹ ಆಗಿತ್ತು. ಆದರೆ ಪಹಲ್ಗಾಮ್ ಗಲಾಟೆಯ ಬಳಿಕ ಹಾನಿಯಾ ಆಮಿರ್ ಅವರನ್ನು ‘ಸರ್ದಾರ್ ಜೀ 3’ ಸಿನಿಮಾದಿಂದ ಹೊರಗಿಡಲಾಗಿದೆ.‘ಸರ್ದಾರ್ ಜೀ 3’ ಸಿನಿಮಾ ಅನ್ನು ನೀರು ಬಾಜ್ವಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಇಂಗ್ಲೆಂಡ್ನಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬ ನಾಯಕಿಯಾಗಿ ಪಾಕಿಸ್ತಾನಿ ನಟಿ, ಗಾಯಕಿ ಹಾನಿಯಾ ಆಮಿರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಚಿತ್ರತಂಡಕ್ಕಿತ್ತು. ಆದರೆ ಪಹಲ್ಗಾಮ್ ದಾಳಿ ಬಳಿಕ ಆಗಿರುವ ಬದಲಾವಣೆಯಿಂದಾಗಿ ನಟಿಯನ್ನು ಸಿನಿಮಾದಿಂದ ಕೈಬಿಡಲಾಗಿದೆ.
ದಿಲ್ಜೀತ್ ದುಸ್ಸಾಂಜ್ ಈ ಹಿಂದೆ ‘ಇಲ್ಲುಮಿನಾಟಿ’ ಹೆಸರಿನ ಲೈವ್ ಮ್ಯೂಸಿಕ್ ಟೂರ್ ಮಾಡಿದ್ದರು. ಬ್ರಿಟನ್ನಲ್ಲಿ ತಮ್ಮ ಲೈವ್ ಶೋ ಮಾಡಿದಾಗ ತಮ್ಮ ಕಾರ್ಯಕ್ರಮದ ಅತಿಥಿಯಾಗಿ ಹಾನಿಯಾ ಆಮಿರ್ ಅವರನ್ನು ಕರೆಸಿದ್ದರು. ದಿಲ್ಜೀತ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ನಟಿ ಹಾನಿಯಾ, ದಿಲ್ಜೀತ್ ಜೊತೆಗೆ ಹಾಡುಗಳನ್ನು ಸಹ ಹಾಡಿದ್ದರು. ದಿಲ್ಜೀತ್ ಹಾಗೂ ಹಾನಿಯಾರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಹ ಖುಷಿ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸಿನಿಮಾದಲ್ಲಿಯೂ ಸಹ ಈ ಇಬ್ಬರನ್ನು ಒಟ್ಟಿಗೆ ತರುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಅದೀಗ ಮುರಿದು ಬಿದ್ದಿದೆ.
ಹಾನಿಯಾ ಆಮಿರ್ ಪಾಕಿಸ್ತಾನದ ಬಲು ಜನಪ್ರಿಯ ನಟಿ. ಟಿವಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹಾನಿಯಾ ನಟಿಸಿದ್ದಾರೆ. ತಮ್ಮ ಸೌಂದರ್ಯ ಹಾಗೂ ಅದ್ಭುತ ನಟನೆಯಿಂದ ಹಾನಿಯಾ ಜನಪ್ರಿಯತೆ ಪಡೆದಿದ್ದಾರೆ.