ಅಬುಧಾಬಿ, ನ. 2: ಆತ್ಮವಿಶ್ವಾಸ ಎಂದರೆ ಇದೆ. ಟಾಸ್ನಲ್ಲಿ ಏನೂ ಇಲ್ಲ, ಎಲ್ಲಾ ಮನಃಸ್ಥಿತಿಯ ಮೇಲೆ ಅವಲಂಬಿತ ಎನ್ನುವ ವಾಸ್ತವವನ್ನು ಪಾಕಿಸ್ತಾನ ತೋರಿಸಿಕೊಟ್ಟಿತು. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಗೆದ್ದಿರುವ ನಿದರ್ಶನದ ಮಧ್ಯೆ ಪಾಕಿಸ್ತಾನ್ ನಮೀಬಿಯಾ ವಿರುದ್ದ ಪಂದ್ಯದಲ್ಲಿ ಟಾಸ್ ಗೆದ್ದೂ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. 45 ರನ್ಗಳಿಂದ ಗೆಲುವನ್ನೂ ಸಾಧಿಸಿತು. ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 189 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ನಮೀಬಿಯಾ ಇನ್ನಿಂಗ್ಸ್ 144 ರನ್ಗೆ ಅಂತ್ಯಗೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ಪಾಕ್ ನಾಯಕ ಬಾಬರ್ ಅಜಂ ಒಂದು ಮಾತು ಹೇಳಿದ್ದರು: “ನಾವು ಈ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿ ಗೆದ್ದಿದ್ದೇವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ. ಮುಂದಿನ ಪಂದ್ಯಗಳಲ್ಲಿ ನಮಗೆ ಮೊದಲು ಬ್ಯಾಟಿಂಗ್ ಮಾಡಬೇಕಾದ ಸಂದರ್ಭ ಬರಬಹುದು. ಅದಕ್ಕೆ ಈ ಪಂದ್ಯದಿಂದಲೇ ಅಣಿಯಾಗಬೇಕು. ಅಲ್ಲದೇ, ನಮ್ಮ ತಂಡದ ಬ್ಯಾಟಿಂಗ್ ಸಾಮರ್ಥ್ಯವನ್ನು ಇನ್ನಷ್ಟು ಒರೆ ಹಚ್ಚಬೇಕಾಗಿದೆ. ಅದಕ್ಕೆ ಮೊದಲು ಬ್ಯಾಟ್ ಮಾಡುತ್ತಿದ್ದೇವೆ”.
ಇಡೀ ವಿಶ್ವಕಪ್ನಲ್ಲಿ ಪಾಕಿಸ್ತಾನಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿರುವ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಈ ಪಂದ್ಯದಲ್ಲೂ ಅದೇ ಕೆಲಸ ಮಾಡಿದರು ಇಬ್ಬರೂ ಮೊದಲ ವಿಕೆಟ್ಗೆ 113 ರನ್ ಜೊತೆಯಾಟ ನೀಡಿದರು. ರಿಜ್ವಾನ್ ಅಜೇಯ 79 ಹಾಗೂ ಬಾಬರ್ 70 ರನ್ ಗಳಿಸಿದರು. ಮೊಹಮ್ಮದ್ ಹಫೀಜ್ ಅಜೇಯ 32 ರನ್ ಗಳಿಸಿದರು.
175 ರನ್ ಮೊತ್ತದ ಗುರಿ ಇಟ್ಟುಕೊಂಡಿದ್ದ ಪಾಕಿಸ್ತಾನಕ್ಕೆ 15 ರನ್ ಹೆಚ್ಚುವರಿ ಸಿಕ್ಕಿತು. ಪಾಕಿಸ್ತಾನ ಒಡ್ಡಿದ 190 ರನ್ ಗುರಿ ನಮೀಬಿಯಾದಂಥ ತಂಡಕ್ಕೆ ಕೈಗೆಟುಕದ ಸವಾಲಾಗಿತ್ತು. ಇಬ್ಬನಿಯ ನಡುವೆಯೂ ಪಾಕ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ನಮೀಬಿಯಾ ತಂಡದ ಬ್ಯಾಟುಗಾರರಿಗೆ ಹೆಚ್ಚು ರನ್ ಗಳಿಸುವ ಅವಕಾಶ ಕೊಡಲಿಲ್ಲ. ಆದರೂ ನಮೀಬಿಯಾ ತನ್ನ ಸೀಮಿತ ಸಾಮರ್ಥ್ಯದ ನಡುವೆಯೂ ಕೆಚ್ಚೆದೆ ಬ್ಯಾಟಿಂಗ್ ಪ್ರದರ್ಶನ ತೋರಿತು. ಡೇವಿಡ್ ವಿಯೆಸ್ ಮತ್ತು ಕ್ರೆಗ್ ವಿಲಿಯಮ್ಸ್ ಅವರಿಬ್ಬರ ಬ್ಯಾಟಿಂಗ್ ನಮೀಬಿಯಾ ಇನ್ನಿಂಗ್ಸ್ನ ಹೈಲೈಟ್ ಎನಿಸಿತು. ವಿಶ್ವದ ಹಲವು ತಂಡಗಳ ಭಾಗವಾಗಿ ಅನುಭವಿ ಎನಿಸಿರುವ ಡೇವಿಡ್ ವಿಯೆಸ್ ಅವರಂತೂ ನಿರ್ಭೀತಿಯಿಂದ ಆಡಿದರು. 31 ಬಾಲ್ನಲ್ಲಿ ಅಜೇಯ 43 ರನ್ ಗಳಿಸಿದರು.