
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ನಡೆದ ಉಗ್ರ ದಾಳಿಯು 26/11 ಮುಂಬೈ ದಾಳಿಯಂತೆಯೇ ಎಲ್ಇಟಿ-ಐಎಸ್ಐ ಜಂಟಿ ಯೋಜನೆಯಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು 26 ಅಮಾಯಕರನ್ನು ಬಲಿ ಪಡೆದಿತ್ತು. ಈ ದಾಳಿಯ ಹಿಂದೆ ಐಎಸ್ಐ ಹಾಗೂ ಲಷ್ಕರ್-ಎ-ತೊಯ್ಬಾದ ಬೆಂಬಲವಿದ್ದು, ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ ಎನ್ನವು ಮಾಹಿತಿಯೊಂದು ಬಹಿರಂಗಗೊಂಡಿದೆ.
ಬೈಸರನ್ ಹುಲ್ಲುಗಾವಲುಗಳಲ್ಲಿ ಜನರನ್ನು ಅವರ ಧರ್ಮವನ್ನು ಕೇಳಿದ ಬಳಿಕ ಹತ್ಯೆ ಮಾಡಲಾಗಿತ್ತು. ಪಾಕಿಸ್ತಾನಿ ಭಯೋತ್ಪಾದಕರು ಮಾತ್ರ ನಡೆಸಿದ್ದರು , ಈ ಯೋಜನೆಯಲ್ಲಿ ಯಾವುದೇ ಕಾಶ್ಮೀರಿ ಭಯೋತ್ಪಾದಕರನ್ನು ಸೇರಿಸಿಕೊಂಡಿರಲಿಲ್ಲ ಎಂದು ಗುಪ್ತಚರ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಪಹಲ್ಗಾಮ್ ದಾಳಿಯು 26/11 ಮುಂಬೈ ದಾಳಿಯಂತೆಯೇ ಎಲ್ಇಟಿ-ಐಎಸ್ಐ ಯೋಜನೆಯಾಗಿತ್ತು.ಪಾಕಿಸ್ತಾನಿ ಬೇಹುಗಾರಿಕೆ ಸಂಸ್ಥೆ ಲಷ್ಕರ್ ಕಮಾಂಡರ್ ಸಾಜಿದ್ ಜಟ್ಟ್‌ಗೆ ವಿದೇಶಿ ಭಯೋತ್ಪಾದಕರನ್ನು ಮಾತ್ರ ಸೇರಿಸಿಕೊಳ್ಳುವಂತೆ ಮತ್ತು ಯೋಜನೆಯಲ್ಲಿ ಕನಿಷ್ಠ ಸ್ಥಳೀಯ ಒಳಗೊಳ್ಳುವಿಕೆಯನ್ನು ಹೊಂದಿರುವಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನದ ಮಾಜಿ ವಿಶೇಷ ಪಡೆಗಳ ಕಮಾಂಡೋ ಸುಲೈಮಾನ್ ಈ ದಾಳಿಯ ನೇತೃತ್ವ ವಹಿಸಿದ್ದ ಎಂದು ಹೇಳಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಚೇರಿ ಇರುವ ಮುರಿಡ್ಕೆಯಲ್ಲಿ ಲಷ್ಕರ್ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದ ಅವರು 2022 ರಲ್ಲಿ ಜಮ್ಮು ಪ್ರದೇಶದ ನಿಯಂತ್ರಣ ರೇಖೆಯನ್ನು ದಾಟಿದ್ದರು. ದಾಳಿ ನಡೆಸಿದ ತಂಡದಲ್ಲಿ ಇತರ ಇಬ್ಬರು ಪಾಕಿಸ್ತಾನಿಗಳು ಕೂಡ ಭಾಗಿಯಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವರದಿಯ ಪ್ರಕಾರ, ಏಪ್ರಿಲ್ 2023 ರಲ್ಲಿ ಪೂಂಚ್‌ನಲ್ಲಿ ಭಾರತೀಯ ಸೇನಾ ಟ್ರಕ್ ಮೇಲೆ ನಡೆದ ದಾಳಿಯಲ್ಲಿ ಸುಲೈಮಾನ್ ಕೂಡ ಭಾಗಿಯಾಗಿದ್ದ, ಇದರಲ್ಲಿ ಐದು ಸೈನಿಕರು ಸಾವನ್ನಪ್ಪಿದ್ದರು. ಬಳಿಕ ಆತ ಎರಡು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಇತರ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಗುರುತುಗಳನ್ನು ಮೂಲಗಳು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.