ವಿದೇಶ
Trending

ಪಹಲ್ಗಾಮ್ ದಾಳಿಕೋರನೊಬ್ಬ ಪಾಕ್‌ನ ಮಾಜಿ ಸೈನಿಕ! 

ಹೊಸದಿಲ್ಲಿ:ಕಾಶ್ಮೀರದ ಪಾಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಭಾಗಿಯಾದ ಪ್ರಮುಖ ಉಗ್ರ ಹಾಶೀಮ್ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ ಮಾಜಿ ಪ್ಯಾರಾ ಕಮಾಂಡೋ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಲಷ್ಕರ್ ಎ ತೋಯ್ಬಾ (LeT) ಸಂಘಟನೆಯೊಂದಿಗೆ ಕೆಲಸ ಮಾಡುತ್ತಿದ್ದ ಈತನನ್ನು, ಕಾಶ್ಮೀರದಲ್ಲಿ ಭಯಾನಕ ದಾಳಿಗಳನ್ನು ನಡೆಸಲು ಕಳುಹಿಸಲಾಗಿತ್ತು ಎಂದು ವರದಿಯಾಗಿದೆ.

ತನಿಖಾ ಮೂಲಗಳ ಪ್ರಕಾರ, ಉಗ್ರ ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನು. ಆತನನ್ನು ಪಾಕಿಸ್ತಾನದ ವಿಶೇಷ ಪಡೆಗಳು LeTಗೆ ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. SSG ಕಮಾಂಡೋಗಳು ಯುದ್ಧದಲ್ಲಿ ಪರಿಣತಿ ಹೊಂದಿದವರು. ಅವರು ಗುಪ್ತ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ತರಬೇತಿ ಪಡೆದಿದ್ದಾರೆ. ಅವರಿಗೆ ದೈಹಿಕ ಮತ್ತು ಮಾನಸಿಕ ತರಬೇತಿ ನೀಡಲಾಗುತ್ತದೆ. ಅಲ್ಲದೆ, ದಾಳಿ ನಡೆಸುವ ತಂತ್ರಗಾರಿಕೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. SSG ಕಮಾಂಡೋಗಳು ಅತ್ಯಾಧುನಿಕ ಆಯುಧಗಳನ್ನು ಬಳಸಲು ಸಮರ್ಥರು. ಅವರು ಯಾವುದೇ ಆಯುಧಗಳಿಲ್ಲದೆ ಹೊಡೆದಾಟ ನಡೆಸಿ ಜಯಿಸುವಲ್ಲಿಯೂ ಪರಿಣತಿ ಹೊಂದಿದ್ದಾರೆ.

ಪಹಲ್ಗಾಮ್‌ನಲ್ಲಾದ ಭೀಕರ ಉಗ್ರ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ 15 ಕಾಶ್ಮೀರಿ ಓವರ್‌ಗ್ರೌಂಡ್ ವರ್ಕರ್ಸ್ (OGW) ಗಳನ್ನು ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯ ಸಮಯದಲ್ಲಿ ಉಗ್ರ ಹಶೀಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಈ ಸುಳಿವು ಘಟನೆಯಲ್ಲಿ ISI ಪಾತ್ರದ ಬಗ್ಗೆ ಅನುಮಾನ ಮೂಡಿಸಿದೆ. ಏಕೆಂದರೆ, ಈ ಹಿಂದೆ ಕಾಶ್ಮೀರದಲ್ಲಿ ನಡೆದ ಗಗಂಗೀರ್ ಮತ್ತು ಬುಟಾ ಪಥ್ರಿಯ ದಾಳಿಯಲ್ಲೂ ISI ಕೈವಾಡವಿತ್ತು ಎಂದು ಶಂಕಿಸಲಾಗಿದೆ.

ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ‘ಉಗ್ರ ಹಾಶೀಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಈ ಹಿಂದೆ ಕಾಶ್ಮೀರದಲ್ಲಿ ನಡೆದ ದಾಳಿಗಳಲ್ಲೂ ISI ಕೈವಾಡವಿತ್ತುʼ ಎಂದಿದ್ದಾರೆ. ಸದ್ಯ ದಾಳಿಯ ಸ್ಥಳವನ್ನು ಗುರುತಿಸಲಾಗಿದೆ. ಬೈಸರನ್ ಸುತ್ತಮುತ್ತಲಿನ ಕಾಡುಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದ ತನಿಖೆಯಲ್ಲಿ OGWಗಳು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುವ ಸ್ಥಳೀಯ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರು ಪಹಲ್ಗಾಮ್‌ ದಾಳಿಯ ತಂಡಕ್ಕೆ ಮಾರ್ಗದರ್ಶನ ನೀಡಿದರು. ಜತೆಗೆ ಆಶ್ರಯ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಿದರು. ಅಂತೆಯೇ ದಾಳಿಗೆ ಬಳಸಿದ ಆಯುಧಗಳನ್ನು ಪೂರೈಸಲು ಸಹಾಯ ಮಾಡಿದರು. ದಾಳಿಯ ಮೊದಲು ಮತ್ತು ನಂತರ ಭಯೋತ್ಪಾದಕರು ಅಡಗಿಕೊಳ್ಳಲು ಸ್ಥಳೀಯರು ಸಹಾಯ ಮಾಡಿದರು ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಹಾಶೀಮ್ ಮೂಸಾ ಮತ್ತು ಅಲಿ ಭಾಯ್ ಎಂಬ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಆದಿಲ್ ಥೋಕರ್ ಮತ್ತು ಆಸಿಫ್ ಶೇಖ್ ಎಂಬ ಇಬ್ಬರು ಸ್ಥಳೀಯರು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆ. OGWಗಳನ್ನು ವಿಚಾರಣೆ ಮಾಡಿದಾಗ, ಇನ್ನೂ ಅನೇಕ ಪಾಕಿಸ್ತಾನಿ ಭಯೋತ್ಪಾದಕರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Related Articles

Leave a Reply

Your email address will not be published. Required fields are marked *

Back to top button