ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ ಅತ್ಯಂತ ಬಡ ಶಾಸಕ ಡಿ ಕೆ ಶಿವಕುಮಾರ್ ಶ್ರೀಮಂತ ಶಾಸಕ..
ಬೆಂಗಳೂರು: ರಾಜಕೀಯ ನಾಯಕರು ಎಷ್ಟು ಆಸ್ತಿ ಹೊಂದಿದ್ದಾರೆ. ಅವರ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತದೆ. ರಾಜಕೀಯಕ್ಕೆ ಬರುವ ಮುನ್ನ ಕೆಲ ನಾಯಕರು ಬಡವರಾಗಿರುತ್ತಾರೆ. ಆದರೆ ನಂತರ ಶ್ರೀಮಂತರಾದ ಅನೇಕ ರಾಜಕೀಯ ನಾಯಕರಿದ್ದಾರೆ. ಇತ್ತೀಚೆಗೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಂಡವು 2023 ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ನಮೂದಿಸಲಾದ ವಿವರಗಳನ್ನು ಆಧರಿಸಿ ಶ್ರೀಮಂತ ಮತ್ತು ಬಡ ಶಾಸಕರ ಪಟ್ಟಿಯನ್ನು ಪ್ರಕಟಿಸಿದೆ.
ದೇಶದ ಅತ್ಯಂತ ಶ್ರೀಮಂತ ಶಾಸಕರು ಎಂದು ಗುರುತಿಸಿಕೊಂಡಿರುವವರ ಒಟ್ಟು ಆಸ್ತಿ ಮೌಲ್ಯ 1,400 ಕೋಟಿ ರೂಪಾಯಿ. ಇನ್ನು ಎಡಿಆರ್ ವರದಿ ಪ್ರಕಾರ ಬಡ ಶಾಸಕರು ಎಂದು ಗುರುತಿಸಿಕೊಂಡಿರುವ ಶಾಸಕರ ಆಸ್ತಿ ಮೌಲ್ಯ ಕೇವಲ 20 ಸಾವಿರ ರೂ. ಇನ್ನು ದೇಶದ ಅತ್ಯಂತ ಶ್ರೀಮಂತ ಶಾಸಕರು ಎಂದು ಗುರುತಿಸಿಕೊಂಡಿದ್ದು, ಬೇರೆ ಯಾರೂ ಅಲ್ಲ ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕದ ಡಿಸಿಎಂ ಡಿ ಕೆ ಶಿವಕುಮಾರ್. ಇವರ ಆಸ್ತಿಯ ಒಟ್ಟು ಮೌಲ್ಯ 1400 ಕೋಟಿ ರೂ. ಇನ್ನು ದೇಶದ ಅತ್ಯಂತ ಬಡ ಶಾಸಕರು ಎಂದು ಗುರುತಿಸಿಕೊಂಡಿದ್ದು, ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ. ಇವರ ಆಸ್ತಿ ಮೌಲ್ಯ ಕೇವಲ 20 ಸಾವಿರ..
ಟಾಪ್ 10 ಶ್ರೀಮಂತ ಶಾಸಕರ ಪೈಕಿ ನಾಲ್ವರು ಕಾಂಗ್ರೆಸ್ ಹಾಗೂ ಮೂವರು ಬಿಜೆಪಿಯವರಾಗಿದ್ದಾರೆ. ವಿಶೇಷ ಎಂದರೆ ಅತ್ಯಂತ ಶ್ರೀಮಂತ ಶಾಸಕರು ಇರುವುದು ಕರ್ನಾಟಕದಲ್ಲೇ ಎಂಬುದನ್ನು ಇದೇ ಎಡಿಆರ್ ವರದಿ ಹೇಳಿದೆ.
ಈ ವರದಿ ಬಗ್ಗೆ ಡಿಕೆಶಿ ಹೇಳಿದ್ದಿಷ್ಟು: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ”ಶ್ರೀಮಂತರೂ ಅಲ್ಲ, ಬಡವರೂ ಅಲ್ಲ ಎಂದಿದ್ದಾರೆ. ವಿಶೇಷ ಎಂದರೆ ಸದ್ಯ ನನ್ನ ಬಳಿ ಇರುವ ಆಸ್ತಿಗಳೆಲ್ಲ ಒಮ್ಮೆಲೇ ಬಂದದ್ದೇನೂ ಅಲ್ಲ, ಕಾಲಕಾಲಕ್ಕೆ ಕಷ್ಟಪಟ್ಟು ಸಂಪಾದಿಸಿದ ಆಸ್ತಿ ಇದಾಗಿದೆ. ಕೆಲವರು ತಮ್ಮ ಆಸ್ತಿಯನ್ನು ಬೇರೆ ಬೇರೆಯವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಆದರೆ ತಮಗೆ ಹಾಗೆ ಮಾಡಿಕೊಳ್ಳುವುದು ಇಷ್ಟ ಇಲ್ಲ, ಹಾಗಾಗಿ ನನ್ನ ಹೆಸರಲ್ಲೇ ಇದೆ ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ದೇಶದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವುದು ಗೌರಿಬಿದನೂರು ಕ್ಷೇತ್ರದ ಸ್ವತಂತ್ರ ಶಾಸಕ ಕೆ.ಎಚ್.ಪುಟ್ಟಸ್ವಾಮಿ, ಇವರ ಆಸ್ತಿ ಒಟ್ಟು ಮೌಲ್ಯ 1,267 ಕೋಟಿ ರೂ. ಅವರನ್ನು ಹೊರತು ಪಡಿಸಿದರೆ ಕಾಂಗ್ರೆಸ್ ನ ಪ್ರಿಯಾಕೃಷ್ಣ 1,156 ಕೋಟಿ ಆಸ್ತಿಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯದ ಅತ್ಯಂತ ಬಡ ಶಾಸಕಿ ಎಂದರೆ ಅದು ಮುರುಳ್ಯ: ಬಿಜೆಪಿಯ ಭಾಗೀರಥಿ ಮುರುಳ್ಯ ಅವರು ಕರ್ನಾಟಕದ ಶಾಸಕರ ಪೈಕಿ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. ಇವರ ಆಸ್ತಿ ಮೌಲ್ಯ ಕೇವಲ 28 ಲಕ್ಷ ರೂ. ಮತ್ತೊಂದೆಡೆ, ದೇಶದ ಟಾಪ್ 20 ಶ್ರೀಮಂತ ಶಾಸಕರ ಪೈಕಿ 12 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ಇನ್ನು ದೇಶದಲ್ಲಿ ಕರ್ನಾಟಕದ ಶೇಕಡಾ 14 ರಷ್ಟು ಶಾಸಕರು ಶ್ರೀಮಂತರಾಗಿದ್ದು, ಅವರ ವೈಯಕ್ತಿಕ ಆಸ್ತಿ 100 ಕೋಟಿ ರೂ.ಗಿಂತ ಹೆಚ್ಚಿದೆ ಎಂದು ಎಡಿಆರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಬಿಟ್ಟರೆ ಅರುಣಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಶಾಸಕರು ಕೋಟ್ಯಧಿಪತಿಗಳಿದ್ದಾರೆ.
ಕರ್ನಾಟಕದ ಒಟ್ಟು 223 ಶಾಸಕರು 64.39 ಕೋಟಿ ರೂಪಾಯಿ ಸರಾಸರಿ ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶದ ಒಟ್ಟು 174 ಶಾಸಕರು 28.24 ಕೋಟಿ ಸರಾಸರಿ ಆಸ್ತಿ ಮೌಲ್ಯ ಹೊಂದಿದ್ದು, ಮಹಾರಾಷ್ಟ್ರದ 284 ಶಾಸಕರು 23.51 ಕೋಟಿ ಮೌಲ್ಯದ ಸರಾಸರಿ ಆಸ್ತಿಯೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ.
ಕಾಂಗ್ರೆಸ್ ಟೀಕಿಸಿದ ಬಿಜೆಪಿ: ಬಿಜೆಪಿ ತನ್ನದೇ ಶೈಲಿಯಲ್ಲಿ ಟೀಕಿಸಿದೆ. ಕಾಂಗ್ರೆಸ್ ಶ್ರೀಮಂತರಿಗೆ ಮಾತ್ರ ನ್ಯಾಯ ಸಲ್ಲಿಸುತ್ತದೆ ಮತ್ತು ಅವರಿಗಷ್ಟೇ ಸ್ಥಾನಗಳನ್ನು ನೀಡುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.