ಕ್ರೈಂ
Trending

ಪತ್ನಿಯ ಕೊಲೆಗೆ ಜೈಲುಪಾಲಾಗಿದ್ದ ಪತಿಗೆ ಶಾಕ್, 5 ವರ್ಷದ ಬಳಿಕ ಪ್ರಿಯಕರನ ಜತೆ ರೆಡ್​ಹ್ಯಾಂಡ್ ಆಗಿ ಸಿಕ್ಕ ಹೆಂಡತಿ!

ಮಡಿಕೇರಿ: ಕೊಡಗು ಜಿಲ್ಲೆ (Kodagu) ಕುಶಾಲನಗರ (Kushalanagar) ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಕೊಲೆ ಪ್ರಕರಣವೊಂದಕ್ಕೆ (Murder Case) ಇದೀಗ ಭಾರಿ ಟ್ವಿಸ್ಟ್ ದೊರೆತಿದೆ. ಅಷ್ಟೇ ಅಲ್ಲ, ಯಾವ ಸಸ್ಪೆನ್ಸ್​, ಹಾರರ್, ಥ್ರಿಲ್ಲರ್, ರೊಮ್ಯಾಂಟಿಕ್ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ಇದೀಗ ಅನಾವರಣಗೊಂಡಿದೆ. ಪೊಲೀಸರ ದಾಖಲೆಗಳ ಪ್ರಕಾರ ಮಲ್ಲಿಗೆ ಎಂಬಾಕೆ ಆಕೆಯ ಗಂಡನ ಕೈಯಿಂದಲೇ ಹತ್ಯೆ ಆಗಿ ಅದಾಗಲೇ ಐದು ವರ್ಷ ಆಗಿ ಹೋಗಿದೆ. ಆಕೆಯನ್ನು ಕೊಲೆ ಮಾಡಿದ್ದಾಕ್ಕಾಗಿ ಗಂಡ ಸುರೇಶ್​ ಎರಡು ವರ್ಷ ಜೈಲೂಟ ಕೂಡ ಮಾಡಿ ಬಂದಿದ್ದಾರೆ. ಆದರೆ, ವಿಚಿತ್ರ ಎಂದರೆ, ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಲ್ಲಿಗೆ ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್​ ಒಂದರಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್​ಗೆ ಕಾಣಿಸಿದೆ. ಅದೂ ಕೂಡ ಆಕೆಯ ಲವರ್ ಜತೆ! ಇದನ್ನು ಗಂಡ ಸುರೇಶ್​ನ ಸ್ನೇಹಿತರು ನೋಡಿ, ತಕ್ಷಣವೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಡಿಕೇರಿ ನಗರ ಪೊಲಿಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲೇ ನೋಡಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು.

ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಯುವಕ ಸುಮಾರು 18 ವರ್ಷಗಳ ಹಿಂದೆ ಮಲ್ಲಿಗೆ ಎಂಬಾಕೆಯನ್ನು ವಿವಾಹವಾಗಿರುತ್ತಾರೆ. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, 2020 ರ ನವೆಂಬರ್​ನಲ್ಲಿ ಇದ್ದಕ್ಕಿದ್ದಂತೆ ಒಂದಿನ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಹಾಗಾಗಿ ಸುರೇಸ್​ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲಿಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸುಮ್ಮನಾಗಿದ್ದರು. ಪತ್ನಿ ಗಣೇಶ್​ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಓಡಿ ಹೋಗಿರುವುದು ಗೊತ್ತಿದ್ದರೂ ಸುರೇಶ್​ ಮನನೊಂದು ಸುಮ್ಮನಾಗಿದ್ದರು.

ಆದರೆ ಸುರೇಶ್​ಗೆ ದುರಾದೃಷ್ಟ ವಕ್ಕರಿಸಿತು. 2021ರ ಜೂನ್​ ಮೂರನೇ ವಾರದಲ್ಲಿ ಕುಶಾಲನಗರಕ್ಕೆ ಖಾಸಗಿ ಕಾರಿನಲ್ಲಿ ಒಂದಷ್ಟು ಮಂದಿ ಪೊಲೀಸರು ಬಂದಿದ್ದಾರೆ. ಬಂದವರು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲಿಸ್ ಠಾಣೆಯ ಸಿಬ್ಬಂದಿಯಾಗಿರುತ್ತಾರೆ. ಅವರು ಸುರೇಶನನ್ನು ಬರ ಹೇಳಿ, ಮಹಿಳೆಯೊಬ್ಬಳ ಮೃತದೇಹ ಸಿಕ್ಕಿದೆ, ಬಂದು ಗುರುತುಪತ್ತೆ ಮಾಡು ಎಂದು ಬಲವಂತದಿಂದ ಬೆಟ್ಟದಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.ಅಲ್ಲಿ ಯಾವುದೋ ಮಹಿಳೆಯ ಸೀರೆ ಲಂಗ, ಒಳ ಉಡುಪು ಚಪ್ಪಲಿ ಎಲ್ಲಾ ತೋರಿಸಿ, ‘ಇದು ನಿನ್ನದೇ ಹೆಂಡತಿಯದ್ದು. ನೀನೇ ಕೊಲೆ ಮಾಡಿದ್ದೀ, ಒಪ್ಪಿಕೋ’ ಎಂದು ಚಿತ್ರ ಹಿಂಸೆ ಕೊಟ್ಟಿದ್ದರಂತೆ. ಇದೇ ಪ್ರಕರಣದಲ್ಲಿ 18-07-2021ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿ ನಂತರ ಅವರು ಜೈಲು ಸೇರಿದ್ದಾರೆ.

ಜೈಲುಪಾಲಾದ ಸುರೇಶ್​ಗೆ ಮೈಸೂರಿನ ಪಾಂಡು ಪೂಜಾರಿ ಎಂಬ ವಕೀಲರ ರೂಪದಲ್ಲಿ ಸಹಾಯ ಬರುತ್ತದೆ. 2022ರ ಜನವರಿಯಲ್ಲಿ ವಕೀಲರ ಕೊರಿಕೆ ಮೇರೆಗೆ ಮಲ್ಲಿಗೆ ಅಸ್ತಿ ಪಂಜರ ಹಾಗೂ ಆಕೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಬೆಟ್ಟದಪುರ ಪೊಲಿಸರು ಮಲ್ಲಿಗೆಯದ್ದು ಎಂದು ಪ್ರತಿಪಾದಿಸಿದ ದೇಹ ಆಕೆಯದ್ದಲ್ಲ ಎಂಬ ವರದಿ ಬರುತ್ತದೆ. ಆದರೂ ಬೆಟ್ಟದಪುರ ಪೊಲೀಸರು ಸುರೇಶನನ್ನು ಎರಡು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿರುತ್ತಾರೆ. ಇದಾದ ಬಳಿಕ ವಕೀಲ ಪಾಂಡು, ಹರಸಾಸಹಪಟ್ಟು ಹೈಕೋರ್ಟ್​ ಮೊರೆ ಹೋಗಿ 2024ರಲ್ಲಿ ಸುರೇಶ್​​ ಅವರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು.

ಇಷ್ಟೆಲ್ಲ ಆದ ಬಳಿಕ, ಕೊಲೆಯಾಗಿರುವ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಕೊಲೆಯಾಗಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ ಮಲ್ಲಿಗೆ ಜೀವಂತವಾಗಿ ಮಡಿಕೇರಿ ಹೋಟೆಲ್​​ನಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್ ಹಾಗೂ ಅವರ ಸ್ನೇಹಿತರ ಕಣ್ಣಿಗೆ ಬಿದ್ದಿದೆ. ಈ ಅವಕಾಶ ಬಿಟ್ಟರೆ ಮತ್ತೆ ಸಿಗಲಗಲ ಎಂದು ಯೋಚಿಸಿದ ಸುರೇಶ್​ ಮತ್ತು ಆತನ ಸ್ನೇಹಿತರು ಮಡಿಕೇರಿ ಪೊಲಿಸರ ಸಹಾಯ ಪಡೆದು ಮಲ್ಲಿಗೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ತನ್ನ ಪ್ರಿಯಕರ ಗಣೇಶನ ಹೊತೆ ವಿರಾಜಪೇಟೆ ತಾಲ್ಲೂಕಿನ ಟಿಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.

ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಪಾಂಡು ಅವರ ಶ್ರಮದಿಂದಾಗಿ ಮಲ್ಲಿಗೆಯನ್ನು ಇದೀಗ ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಇದೀಗ ಸುಳ್ಳು ಆರೋಪ ಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆ ತನಿಖಾಧಿಕಾರಿ, ಮೈಸೂರು ಎಸ್​ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದೆ. ಕುಶಾಲನಗರ ಗ್ರಾಮಾಂತರ ಠಾನೆ ಪೊಲಿಸರು ಯಾಕೆ ಮಲ್ಲಿಗೆಯನ್ನು ಹುಡುಕಲಿಲ್ಲ, ಇತ್ತ ಬೆಟ್ಟದ ಪುರ ಠಾಣೆ ಪೊಲಿಸರು ಯಾವುದೋ ಮಹಿಳೆಯ ಮೃತದೇಹವನ್ನು ಮಲ್ಲಿಗೆಯದ್ದೇ ದೇಹ ಎಂದು ಯಾಕೆ ಕೇಸ್ ದಾಖಲಿಸಿದ್ದರು, ಹಾಗೆಯೇ ಅಂದು ಪತ್ತೆಯಾದ ದೇಹ ಯಾರದ್ದು, ಆಕೆಯನ್ನು ಯಾರು ಕೊಲೆ ಮಾಡಿದ್ದು ಈ ಎಲ್ಲಾ ವಿಚಾರಗಳು ಇದೀಗ ಹೊಸ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಹಾಗೇಯೇ ಈ ಮೂಲಕ ಅಮಾಯಕ ಆದಿವಾಸಿ ಸುರೇಶ್​ ಮತ್ತು ಆತನ ಕುಟುಂಬಕ್ಕೆ ನ್ಯಾಯ ದೊರಕಬೇಕಿದೆ.

Related Articles

Leave a Reply

Your email address will not be published. Required fields are marked *

Back to top button