Rajakiya

ಪಂಜಾಬ್: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, 14 ಇಲಾಖೆಗಳನ್ನು ತಮ್ಮೊಂದಿಗೆ ಇಟ್ಟುಕೊಂಡು ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ ಅವರಿಗೆ ಗೃಹ ಮತ್ತು ಒಪಿ ಸೋನಿ ಅವರಿಗೆ ಆರೋಗ್ಯ ಖಾತೆಯನ್ನು ನೀಡಿದ್ದಾರೆ.

ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚನ್ನಿ, ಸ್ಥಳೀಯ ಸರ್ಕಾರ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗಳನ್ನು ಹಿರಿಯ ಸಂಪುಟ ಸಹೋದ್ಯೋಗಿ ಬ್ರಹ್ಮ ಮೊಹಿಂದ್ರ ಅವರಿಗೆ ನೀಡಿದ್ದಾರೆ.

ವಿದ್ಯುತ್, ಅಬಕಾರಿ, ಗಣಿಗಾರಿಕೆ ಮತ್ತು ಭೂವಿಜ್ಞಾನ, ಪರಿಸರ ಮತ್ತು ನಾಗರಿಕ ವಿಮಾನಯಾನ ಸೇರಿದಂತೆ ಪ್ರಮುಖ ಖಾತೆಗಳನ್ನು ಮುಖ್ಯಮಂತ್ರಿ ಚನ್ನಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ರಾಂಧವ ಅವರು ಸಹಕಾರ ಮತ್ತು ಜೈಲು ಇಲಾಖೆಗಳನ್ನು ಹೊಂದಿದ್ದು, ಸೋನಿ ರಕ್ಷಣಾ ಸೇವೆಗಳ ಕಲ್ಯಾಣ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಇಲಾಖೆಯನ್ನು ನೋಡಿಕೊಳ್ಳುತ್ತಾರೆ. ಮತ್ತೊಬ್ಬ ಹಿರಿಯ ಸಂಪುಟ ಸಚಿವ ಮನ್‌ ಪ್ರೀತ್ ಸಿಂಗ್ ಬಾದಲ್ ಅವರು ಹಣಕಾಸು ಖಾತೆಯನ್ನು ಪಡೆದಿದ್ದಾರೆ. ಬಾದಲ್ ಸೇರಿದಂತೆ ಅಮರಿಂದರ್ ಸಿಂಗ್ ನೇತೃತ್ವದ ಸಂಪುಟದ ಭಾಗವಾಗಿದ್ದ ಹಲವಾರು ಸಚಿವರು ತಮ್ಮ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

ತೃಪ್ತ್‌ ರಾಜಿಂದರ್ ಸಿಂಗ್ ಬಾಜ್ವಾ ಗ್ರಾಮೀಣ ಮತ್ತು ಪಂಚಾಯತ್, ಮತ್ತು ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಡೈರಿ ಅಭಿವೃದ್ಧಿ ಸಚಿವರಾಗಿದ್ದಾರೆ. ಅರುಣಾ ಚೌಧರಿಗೆ ಕಂದಾಯ, ಸುಖ್‌ಬಿಂದರ್ ಸಿಂಗ್ ಸರ್ಕಾರಿಯಾಗೆ ಜಲ ಸಂಪನ್ಮೂಲ, ರಜಿಯಾ ಸುಲ್ತಾನಾ ನೀರು ಪೂರೈಕೆ ಮತ್ತು ನೈರ್ಮಲ್ಯ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಭರತ್ ಭೂಷಣ್ ಅಶು ಅವರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗಳನ್ನು ನೀಡಲಾಗಿದೆ.

ವಿಜಯ್ ಇಂದರ್ ಸಿಂಗ್ಲಾ ಅವರು ಲೋಕೋಪಯೋಗಿ ಇಲಾಖೆಯನ್ನು ನಿರ್ವಹಿಸಲಿದ್ದರೆ, ಶಾಲಾ ಶಿಕ್ಷಣ ಇಲಾಖೆಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಪರ್ಗತ್ ಸಿಂಗ್‌ ಅವರಿಗೆ ನೀಡಲಾಗಿದೆ. ಕ್ರೀಡಾ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಹೊಸದಾಗಿ ಸೇರ್ಪಡೆಯಾದವರಲ್ಲಿ, ರಣದೀಪ್ ಸಿಂಗ್ ನಭಾ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ರಾಣಾ ಗುರ್ಜಿತ್ ಸಿಂಗ್‌ಗೆ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ, ಮತ್ತು ತೋಟಗಾರಿಕೆ ಇಲಾಖೆ, ರಾಜ್ ಕುಮಾರ್ ವರ್ಕಾ ಅವರಿಗೆ ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಅಲ್ಪಸಂಖ್ಯಾತ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ, ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರಿಗೆ ಸಾರಿಗೆ, ಸಂಗತ್ ಸಿಂಗ್ ಗಿಲ್ಜಿಯಾನ್ ಅರಣ್ಯ, ವನ್ಯಜೀವಿ ಮತ್ತು ಕಾರ್ಮಿಕ ಇಲಾಖೆಯನ್ನು ನೀಡಿದ್ದು, ಗುರ್ಕೀರತ್ ಸಿಂಗ್ ಕೊಟ್ಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳನ್ನು ನೀಡಲಾಗಿದೆ.

ಸಿಬ್ಬಂದಿ, ಜಾಗರೂಕತೆ, ಸಾಮಾನ್ಯ ಆಡಳಿತ, ನ್ಯಾಯ, ಕಾನೂನು ಮತ್ತು ಶಾಸಕಾಂಗ ವ್ಯವಹಾರಗಳು, ಮಾಹಿತಿ ಮತ್ತು ಸಾರ್ವಜನಿಕ ಸಂಬಂಧಗಳು, ಹೂಡಿಕೆ ಉತ್ತೇಜನ, ಆತಿಥ್ಯ, ವಿದ್ಯುತ್, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಉಸ್ತುವಾರಿಯನ್ನು ಮುಖ್ಯಮಂತ್ರಿ ಚನ್ನಿ ವಹಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button