Rajakiya

ಪಂಜಾಬ್ ನಲ್ಲಿ ಅಧಿಕಾರಕ್ಕೇರುವುದೇ ಆಮ್ ಆದ್ಮಿ:ಪಕ್ಷದ ಬಲವೇನು?

ಚಂಡೀಗಢ: ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ಪಂಜಾಬ್ ನಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರ ಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಈ ಬಾರಿ ಅಧಿಕಾರಕ್ಕೇರಲು ಆಮ್ ಆದ್ಮಿ ಪಕ್ಷ ಶತ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕೆಲ ಸಮೀಕ್ಷೆಗಳೂ ಆಮ್ ಆದ್ಮಿ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದೂ ಹೇಳಿವೆ.

ಒಂದೆಡೆ ಪ್ರಮುಖ ವಿಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಕೃಷಿ ಕಾಯಿದೆಯ ವಿಚಾರದಲ್ಲಿ ಮುನಿಸಿಕೊಂಡು ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದೆ. ದಲಿತ ಮತಗಳ ಮೇಲೆ ಕಣ್ಣಿಟ್ಟು ಬಿಎಸ್ ಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ತವಕದಲ್ಲಿವೆ.

ಬಿಜೆಪಿಯೂ ಹೊಸ ರಾಜಕೀಯ ರಣತಂತ್ರಗಳನ್ನು ಹೆಣೆಯಲು ಸಿದ್ಧವಾಗಿದ್ದು, ಕಾಂಗ್ರೆಸ್ ಪಕ್ಷದ ಭಿನ್ನಮತದ ಲಾಭ ಪಡೆಯಲು ಮುಂದಾಗಿದೆ.

ಕ್ಯಾಪ್ಟನ್ ಅಮರೀಂದರ್‌ ಸಿಂಗ್‌ ಅವರ ರಾಜೀನಾಮೆ, ನವಜೋತ್ ಸಿಂಗ್ ಸಿಧು ಅವರ ಬಂಡಾಯ,ಹಲವು ಶಾಸಕರುಗಳ ಅಸಮಾಧಾನ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

ಹೊಸ ಅಲೆ

ಪಂಜಾಬ್ ನಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ 2017 ರ ವಿಧಾನಸಭಾ ಚುನಾವಣೆಯಲ್ಲಿ 23.7% ಮತಗಳನ್ನು ಪಡೆದಿತ್ತು. 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಪ್ 20 ಸ್ಥಾನಗನ್ನು ಗೆದ್ದಿತ್ತು,ಮಿತ್ರಪಕ್ಷ ಲೋಕ್ ಇನ್ಸಾಫ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿರೋಮಣಿ ಅಕಾಲಿದಳ 15 ಮತ್ತು ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆದಿತ್ತು.

2014 ರ ಲೋಕಸಭಾ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 4 ರಲ್ಲಿ ಆಪ್ ಗೆದ್ದು ಗಮನ ಸೆಳೆದಿತ್ತು. 24.40% ಮತಗಳನ್ನು ಪಡೆಯುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಆದರೆ 2019 ರಲ್ಲಿ 3 ಲೋಕಸಭಾ ಸ್ಥಾನಗನ್ನು ಕಳೆದುಕೊಂಡು 1 ರಲ್ಲಿ ಮಾತ್ರ ಜಯಗಳಿಸಿತ್ತು.7.38% ಮತಗಳನ್ನು ಮಾತ್ರ ಪಡೆದಿತ್ತು .

ಗಮನ ಸೆಳೆದ 6 ಅಂಶಗಳು

ಈಗಾಗಲೇ ಪಂಜಾಬ್ ಗೆ ಆಗಮಿಸಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಕೇಜ್ರಿವಾಲ್ ಅವರು,’ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಎಲ್ಲರೂ ಹೆಮ್ಮೆ ಪಡುವಂತವರಾಗಿರುತ್ತಾರೆ’ ಎಂದು ಕುತೂಹಲ ಮೂಡಿಸಿದ್ದಾರೆ.

ಆಮ್ ಆದ್ಮಿ ಪಕ್ಷ 6 ಪ್ರಮುಖ ಅಂಶಗಳ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದು, 1. ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ,2.ಎಲ್ಲಾ ಔಷಧಿಗಳು, ಶಸ್ತ್ರಚಿಕಿತ್ಸೆಗಳು, ಪರೀಕ್ಷೆಗಳು ಉಚಿತ, 3.ಎಲ್ಲರಿಗೂ ಆರೋಗ್ಯ ಕಾರ್ಡ್, 4. 16,000 ಪಿಂದ್ ವಾರ್ಡ್ ಕ್ಲಿನಿಕ್ ತೆರೆಯುವುದು, 5.ವಿಶ್ವದರ್ಜೆಯ ಹೊಸ ಸರಕಾರಿ ಆಸ್ಪತ್ರೆಗಳ ನಿರ್ಮಾಣ, ಹಳೆಯ ಆಸ್ಪತ್ರೆಗಳು ಮೇಲ್ದರ್ಜೆಗೆ,6.ರಸ್ತೆ ಅಪಘಾತದ ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button