ಪಂಜಾಬ್ ಆಲ್ ರೌಂಡರ್ ದೀಪಕ್ ಹೂಡ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!
ದುಬೈ: ರೋಚಕ ಹಂತಕ್ಕೆ ತಲುಪಿದ್ದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ 2 ರನ್‌ನಿಂದ ಗೆದ್ದಿತ್ತು. ಅಸಲಿಗೆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸುಲಭವಾಗಿ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಕಾರ್ತಿಕ್ ತ್ಯಾಗಿ ಪಂಜಾಬ್ ಗೆಲುವಿನೋಟಕ್ಕೆ ಬ್ರೇಕ್ ಹಾಕಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ರೋಚಕ ಜಯವನ್ನು ಎಲ್ಲರೂ ಸಂಭ್ರಮಾಚರಿಸುತ್ತಿದ್ದಾರೆ. ಈ ಮಧ್ಯೆ ಪಂಜಾಬ್ ಆಲ್ ರೌಂಡರ್ ದೀಪಕ್ ಹೂಡಾ ಅವರ ಪೋಸ್ಟ್ ಒಂದು ಕಿಡಿ ಹಚ್ಚಿದೆ. ಪಂಜಾಬ್ ಸೋತಿದ್ದಕ್ಕೂ, ಪಂದ್ಯದ ದಿನದಂದೇ ದೀಪಕ್ ಹೂಡಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದು ಬಹಳ ಚರ್ಚೆಗೀಡಾಗಿದೆ.
ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲಿ ಶಬೀರ್ ಹುಸೇನ್ ಶೇಖದಮ್ ಖಾಂಡ್ವಾವಾಲಾ ಮುಂದಾಳತ್ವದ ಆಯಂಟಿ ಕರಪ್ಶನ್ ಯುನಿಟ್ (ಎಸಿಯು) ಹದ್ದಿನಗಣ್ಣಿಟ್ಟಿದೆ. ದೀಪಕ್ ಹೂಡಾ ಪೋಸ್ಟ್ ವಿಚಾರದಲ್ಲೂ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಭ್ರಷ್ಟಾಚಾರ ವಿರೋಧಿ ಸಮಿತಿ ತನಿಖೆ ನಡೆಸುವುದರಲ್ಲಿದೆ.
ಮಂಗಳವಾರ 2 PM ಹೊತ್ತಿಗೆ ಅಂದರೆ ಪಂದ್ಯ ಶುರುವಾಗೋಕೂ ಮುಂಚೆ ದೀಪಕ್ ಹೂಡಾ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಹೂಡಾ ಹೆಲ್ಮೆಟ್ ಧರಿಸುತ್ತಿರುವ ಚಿತ್ರ ಆ ಪೋಸ್ಟ್‌ನಲ್ಲಿತ್ತು. ‘ಹಿಯರ್ ವೀ ಗೋ (ಆಡಲು ನಾವು ಸಜ್ಜಾಗಿದ್ದೇವೆ) ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
ಹೂಡಾ ಅವರ ಈ ಪೋಸ್ಟ್ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಉಲ್ಲಂಘಿಸಿದಂತೆ ಮೇಲ್ನೋಟಕ್ಕೆ ಇದೆ. ಇದರ ಬಗ್ಗೆ ನಾವು ತನಿಖೆ ಮಾಡುತ್ತೇವೆ ಎಂದು ಅಸಿಯು ಅಧಿಕಾರಿಗಳು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ಕೂಡ, ಹೂಡಾ ಪೋಸ್ಟ್‌ನಿಂದ ನಿಯಮ ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸಲಿದೆ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಮಂಗಳವಾರದ ಪಂದ್ಯದಲ್ಲಿ ಹೂಡ 2 ಎಸೆತಗಳನ್ನು ಎದುರಿಸಿ ರನ್ ಬಾರಿಸದೆ ಔಟ್ ಆಗಿದ್ದರು. 19.5ನೇ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿ ಅವರ ಎಸೆತದ ವೇಳೆ ಹೂಡಾ ಔಟ್ ಆಗಿದ್ದರು. ಪರಿಣಾಮವಾಗಿ ಪಂಜಾಬ್ ಪಂದ್ಯವನ್ನು 2 ರನ್‌ನಿಂದ ಸೋತಿತ್ತು. ಹೂಡಾ ಎರಡು ಎಸೆತಗಳಿಗೆ 2 ರನ್ ಬಾರಿಸಿದ್ದರೂ ಪಂದ್ಯ ಟೈ ಆಗಿ ಸೂಪರ್ ಓವರ್‌ನತ್ತ ತಿರುಗುತ್ತಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೆವಿಸ್ 36, ಯಶಸ್ವಿ ಜೈಸ್ವಾಲ್ 49, ಸಂಜು ಸ್ಯಾಮ್ಸನ್ 4, ಲಿಯಾಮ್ ಲಿವಿಂಗ್‌ಸ್ಟೋನ್ 25, ರಿಯಾನ್ ಪರಾಗ್ 4, ಮಹಿಪಾಲ್ ಲೋಮ್ರರ್ 43, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 5, ಚೇತನ್ ಸಕಾರಿಯಾ 7, ಕಾರ್ತಿಕ್ ತ್ಯಾಗಿ 1 ರನ್‌ನೊಂದಿಗೆ 20 ಓವರ್ ಎಲ್ಲಾ ವಿಕೆಟ್ ಕಳೆದು 185 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ನಿಂದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ಲಭಿಸಿತು. ಕೆಎಲ್ ರಾಹುಲ್ 49 (33), ಮಯಾಂಕ್ ಅಗರ್ವಾಲ್ (43), ಐಡನ್ ಮಾರ್ಕ್ರಮ್ 26, ನಿಕೋಲಸ್ ಪೂರನ್ 32 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 183 ರನ್ ಗಳಿಸಿ ಶರಣಾಯಿತು. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಅರ್ಷದೀಪ್ ಸಿಂಗ್ 32 ರನ್‌ಗೆ 5 ವಿಕೆಟ್, ಮೊಹಮ್ಮದ್ ಶಮಿ 3, ಇಶಾನ್ ಪೊರೆಲ್ 1, ಹರ್ಪ್ರೀತ್ ಬ್ರಾರ್ 1 ವಿಕೆಟ್ ಪಡೆದರೆ, ಪಂಜಾಬ್ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ್‌ನ ಚೇತನ್ ಸಕಾರಿಯಾ 1, ಕಾರ್ತಿಕ್ ತ್ಯಾಗಿ 2, ರಾಹುಲ್ ತೆವಾಟಿಯಾ 1 ವಿಕೆಟ್ ಪಡೆದು ಗಮನ ಸೆಳೆದರು.