ಇತ್ತೀಚಿನ ಸುದ್ದಿರಾಜ್ಯ

ಪಂಚ ಗ್ಯಾರಂಟಿಯಿಂದಾಗಿ ಈ ವರ್ಷ ಅಭಿವೃದ್ಧಿಗೆ ಹಣ ನೀಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್

ರಾಜ್ಯ ಸರ್ಕಾರವು ಐದು ಚುನಾವಣಾ ಭರವಸೆಗಳ ಅನುಷ್ಠಾನ ಮಾಡಿರುವುದರಿಂದ ಆರ್ಥಿಕ ಅಡಚಣೆ ಉಂಟಾಗಿದೆ.

ಹಾಗಾಗಿ, ಈ ವರ್ಷ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇದೇ ವೇಳೆ, ಕೆಲವು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದು, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಕೋರಿಕೆಯಂತೆ (ಸರ್ಕಾರಿ ನೌಕರರ) ವರ್ಗಾವಣೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕತ್ವಕ್ಕೆ ದೂರು ನೀಡಿದ್ದಾರೆ. ಸಚಿವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಭಾರಿ ನಿರೀಕ್ಷೆಗಳನ್ನು ಹೊಂದಿರುವ ಪಕ್ಷದ ಶಾಸಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಳ್ಮೆಯಿಂದ ಇರಬೇಕು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಉಚಿತ ಗ್ಯಾರಂಟಿಗಳನ್ನು ಈಡೇರಿಸಲು ಹಣಕಾಸಿನ ಅಡಚಣೆಯಾಗುವುದನ್ನು ಅರಿತುಕೊಳ್ಳಬೇಕು” ಎಂದು ತಮ್ಮ ಪಕ್ಷದ ಅಸಮಾಧಾನಿತ ಶಾಸಕರನ್ನು ಉದ್ದೇಶಿಸಿ ಹೇಳಿಕೆ ನೀಡಿದರು.

“ನಾವು ಕೂಡ ಕೆಲವು ಹಣಕಾಸಿನ ವಿಷಯಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಲು ಬಯಸುತ್ತೇವೆ. ಗುರುವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಅವರಿಗೆ ಸರ್ಕಾರದ ಪರಿಸ್ಥಿತಿ ಕುರಿತು ವಿವರಿಸಲಾಗುವುದು. ಏಕೆಂದರೆ, ನಾವು 40,000 ಕೋಟಿ ರೂಪಾಯಿಗಳನ್ನು ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಮೀಸಲಿಡಬೇಕಾಗುತ್ತದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ” ಎಂದು ಆರೋಪಗಳನ್ನು ತಳ್ಳಿ ಹಾಕಿದರು.

Related Articles

Leave a Reply

Your email address will not be published. Required fields are marked *

Back to top button