ಕ್ರೀಡೆ
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ
ಜೈಪುರ: ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಇಲ್ಲಿನ ಸವಾಯ್ ಮನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮಾರ್ಟಿನ್ ಗುಪ್ಟಿಲ್ ಅವರ ಆಕರ್ಷಕ 70 ಮತ್ತು ಮಾರ್ಕ್ ಚಾಪ್ ಮನ್ ಅವರ 63 ರನ್ ಗಳ ನೆರವಿನಿಂದ 164 ರನ್ ಕಲೆ ಹಾಕಿತು.
ನ್ಯೂಜಿಲೆಂಡ್ ನೀಡಿದ್ದ ಸವಾಲಿನ 164 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವುದರೊಂದಿಗೆ ವಿಜಯದ ನಗೆ ಬೀರಿತು.
ಆರಂಭಿಕ ಆಟಗಾರ ಕೆ.ಎಲ್. ರಾಹುಲ್ 15, ರೋಹಿತ್ ಶರ್ಮಾ 48, ಸೂರ್ಯ ಕುಮಾರ್ ಯಾದವ್ ಆಕರ್ಷಕ 62 ಹಾಗೂ ರಿಷಭ್ ಪಂತ್ 17, ಶ್ರೇಯಸ್ ಅಯ್ಯರ್ ಅವರ 5 ರನ್ ಗಳ ನೆರವಿನೊಂದಿಗೆ ಟೀಂ ಇಂಡಿಯಾ ಕಿವೀಸ್ ವಿರುದ್ಧ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.