ಕ್ರೈಂ

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು : ಕನಕಪುರದ ನೈಸ್‌ ರಸ್ತೆಯಲ್ಲಿ ಅಜಾಗರೂಕತೆಯಿಂದ ಅತಿ ವೇಗವಾಗಿ ಬಂದ ಲಾರಿಯೊಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಸರಣಿ ಅಪಘಾತ ಸಂಭವಿಸಿದೆ. ಇದರಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಉಳಿದ ನಾಲ್ವರು ಗಾಯಗೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಬೊಮ್ಮನಹಳ್ಳಿಯ ನಿವಾಸಿಗಳಾದ ತಾಜಿಲ್‌(25), ಅಭಿಲಾಷ್‌(25), ಜೀನಾ(26), ಶಿಲ್ಪ(30) ಮೃತಪಟ್ಟವರು. ಘಟನೆ ಬಳಿಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಲಾರಿ ಚಾಲಕ ಪರಾರಿಯಾಗಿದ್ದಾನೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದರ ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಸ್‌ ಸಂಸ್ಥೆ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಚಾರ ಪೊಲೀಸ್‌ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ವ್ಯಾಗನರ್‌ ಕಾರಿನಲ್ಲಿ ಬೊಮ್ಮನಹಳ್ಳಿಯಿಂದ ಶುಕ್ರವಾರ ರಾತ್ರಿ 9.30ಕ್ಕೆ ತುಮಕೂರಿನ ಕಡೆಗೆ ಹೋಗುತ್ತಿದ್ದರು. ನೈಸ್‌ ರಸ್ತೆಯಲ್ಲಿ ಅಪಘಾತವಾದ ಸ್ಥಳದಿಂದ ಕೆಲವು ಕಿ.ಮೀ ದೂರದಲ್ಲಿ ನೈಸ್‌ ಸಂಸ್ಥೆ ಕಾಮಗಾರಿ ಕೈಗೊಂಡಿದ್ದ ಕಾರಣ ಸುಮಾರು 8 ಕಿ.ಮೀ ದೂರದವರೆಗೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಹಾಗಾಗಿ, ನೈಸ್‌ ರಸ್ತೆಯಲ್ಲಿ ಬಹಳ ನಿಧಾನವಾಗಿ ವಾಹನಗಳು ಸಂಚರಿಸುತ್ತಿದ್ದವು. ಇದೇ ರಸ್ತೆಯಲ್ಲಿ ತಮಿಳುನಾಡು ಕಡೆಯಿಂದ ಬಂದ ಲಾರಿ, ಪುರವಂಕರ ಅಪಾರ್ಟ್‌ಮೆಂಟ್‌ ಬಳಿ ಹಿಂದಿನಿಂದ ವ್ಯಾಗನರ್‌, ಸ್ವಿಫ್ಟ್‌, ಇನ್ನೊವಾ ಕಾರುಗಳಿಗೆ ಗುದ್ದಿದೆ. ಈ ಕಾರುಗಳು, ಮುಂದಿದ್ದ ಎರಡು ಕಂಟೈನರ್‌ಗಳಿಗೆ ಗುದ್ದಿವೆ. ಅಪಘಾತದಲ್ಲಿ ವ್ಯಾಗನರ್‌ ಕಾರು ನಜ್ಜುಗುಜ್ಜಾಗಿ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಬೇರೆ ಕಾರಿನಲ್ಲಿದ್ದ ನಾಲ್ವರಿಗೆ ಸಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ಲಾರಿ ಚಾಲಕನಿಗೆ ಶೋಧ ನಡೆಸಲಾಗುತ್ತಿದೆ.

ನೈಸ್‌ ಸಂಸ್ಥೆ ವಿರುದ್ಧವೂ ನಿರ್ಲಕ್ಷ್ಯ ಕೇಸು :

ನೈಸ್‌ ರಸ್ತೆಯಲ್ಲಿ ಸಂಭವಿಸಿದ ಅಪಘಾತ ಸ್ಥಳಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ”ಅಪಾಯ ಇರುವ ಪ್ರದೇಶಗಳಲ್ಲಿ ರೆಂಬ್ಲರ್‌ ಹಾಗೂ ದೀಪದ ವ್ಯವಸ್ಥೆ ಮಾಡಲು ಈ ಹಿಂದೆ ನೈಸ್‌ ಸಂಸ್ಥೆಗೆ ಸೂಚಿಸಲಾಗಿತ್ತು. ನೋಟಿಸ್‌ಗಳನ್ನೂ ಕೊಟ್ಟಿದ್ದೆವು. ಆದರೆ ಅಲ್ಲಿ ರೆಂಬ್ಲರ್‌ ಹಾಗೂ ದೀಪದ ವ್ಯವಸ್ಥೆ ಮಾಡಿರಲಿಲ್ಲ. ಲೈಂಟಿಂಗ್‌ ವ್ಯವಸ್ಥೆ ಇಲ್ಲದಿರುವುದೂ ಸಹ ಈ ರಸ್ತೆ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ನಿರ್ಲಕ್ಷ್ಯ ತೋರಿಸಿದ ಆರೋಪದ ಮೇಲೆ ನೈಸ್‌ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು,” ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button