ನೂತನ ಪಠ್ಯಕ್ರಮದಲ್ಲಿ ಇಸ್ರೋ ಸಾಧನೆಗಳು, ಯೋಜನೆಗಳ ವಿಚಾರಗಳ ಸೇರ್ಪಡೆ : ಸಚಿವ ಬಿ.ಸಿ. ನಾಗೇಶ್
‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಅನುಸಾರ ರಚನೆಯಾಗುವ ನೂತನ ಪಠ್ಯಕ್ರಮದಲ್ಲಿ ಇಸ್ರೋ ಸಾಧನೆಗಳು, ಯೋಜನೆಗಳ ವಿಚಾರಗಳನ್ನು ಸೇರ್ಪಡೆಗೊಳಿಸಲು ಇಸ್ರೋದಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು , ‘ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಧಾರಿತ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಮನೋಭಾವ ಮೂಡಿಸುವುದರ ಮೇಲೆ ಭಾರತದ ಭವಿಷ್ಯವಿದೆ ಎಂದರು. ಹಾಗೆ ಶಾಲಾ ಶಿಕ್ಷಣದಲ್ಲಿ ಸರಳವಾಗಿ ಅರ್ಥವಾಗುವಂತೆ ವಿಜ್ಞಾನ, ಗಣಿತವನ್ನು ಪಾಠ ಮಾಡಬೇಕು. ಅದಲ್ಲದೆ ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮತ್ತು ಕುತೂಹಲ ಮೂಡಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ಡಾ.ಕೆ ಶಿವನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. ಅದಲ್ಲದೆ ರಾಜ್ಯದಲ್ಲಿ ಎನ್‌ಇಪಿ ಜಾರಿಗೆ ಅಗತ್ಯವಾದ ಎಲ್ಲ ರೀತಿಯ ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡಿ ಸಹಕಾರ ನೀಡುವ ಭರವಸೆಯನ್ನು ಕೆ. ಶಿವನ್ ನೀಡಿದ್ದಾರೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.