ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಕೇಂದ್ರ ಸರ್ಕಾರದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯ ಗೌರವ ಲಭಿಸಿದೆ. ನೀರಜ್ ಚೋಪ್ರಾ ಸೇರಿ ಒಟ್ಟು 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆ. ಇದರಲ್ಲಿ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ ಎನಿಸಿರುವ ಮಿಥಾಲಿ ರಾಜ್ ಅವರೂ ಇದ್ದಾರೆ. ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದವರೆಲ್ಲರಿಗೂ ಖೇಲ್ ರತ್ನ ಅಥವಾ ಅರ್ಜುನ ಪ್ರಶಸ್ತಿಯ ಗೌರವ ಪ್ರಾಪ್ತಿಯಾಗಿದೆ.
ಕಂಚಿನ ಪದಕ ಪಡೆದ ಭಾರತ ಹಾಕಿ ತಂಡದ ಎಲ್ಲಾ ಸದಸ್ಯರಿಗೂ ಅರ್ಜುನ ಪ್ರಶಸ್ತಿ ಬಂದಿದೆ. ಹಾಕಿ ತಂಡದ ನಾಯಕ ಶ್ರೀಜೇಶ್ ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ಹಾಕಿ ಅಟಗಾರ ಮನ್ಪ್ರೀತ್ ಸಿಂಗ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ಬಂದಿದೆ.
ಹಾಸನದ ಯುವಕ, ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿ ಆಗಿರುವ ಸುಹಾಸ್ ಲಾಳನಕೆರೆ ಯತಿರಾಜ್ ಅವರು ಅರ್ಜುನ ಅವಾರ್ಡ್ ಗಿಟ್ಟಿಸಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಸುಹಾಸ್ ಪದಕ ಜಯಿಸಿದ್ದರು. ಟೀಮ್ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಅವರಿಗೂ ಅರ್ಜುನ ಅವಾರ್ಡ್ ಸಿಕ್ಕಿದೆ. ಒಟ್ಟು 35 ಮಂದಿಗೆ ಅರ್ಜುನ ಪ್ರಶಸ್ತಿ ಗೌರವ ಬಂದಿದೆ.
ಖೇಲ್ ರತ್ನ ಪ್ರಶಸ್ತಿ ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಎಂದು ಕರೆಯಲಾಗುತ್ತಿತ್ತು. ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ಈ ಪ್ರಶಸ್ತಿ ಹೆಸರನ್ನು ರಾಜೀವ್ ಗಾಂಧಿ ಬದಲು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಬದಲಾಯಿಸಿದೆ. ಮೇಜರ್ ಧ್ಯಾನ್ ಚಂದ್ ಅವರು ಭಾರತ ಕಂಡ ಅತ್ಯುತ್ತಮ ಹಾಕಿ ಆಟಗಾರರಾಗಿದ್ದವರು. ಇವರ ಹೆಸರಿನಲ್ಲಿ ಭಾರತದ ಅತ್ಯುಚ್ಛ ಕ್ರೀಡಾ ಪ್ರಶಸ್ತಿ ನೀಡಲಾಗುತ್ತಿದೆ.