Ninna Sanihake Review:ಲಿವಿನ್ ರಿಲೇಷನ್‍ಶಿಪ್ ಬಹುತೇಕ ಕನ್ನಡಿಗರಿಗೆ ಹೊಸದು ಅನ್ನಿಸಬಹುದು.ಆದರೆ ಹೊರ ಜಿಲ್ಲೆಗಳಿಂದ ಅಥವಾ ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಮಂದಿಗೆ ಹಳೆಯದೇನಲ್ಲ. ಹೀಗೆ ಲಿವಿನ್ ಸಂಬಂಧದಲ್ಲಿರುವ ಜೋಡಿಯೊಂದರ ಕಥೆ, ವ್ಯಥೆಯೇ ನಿನ್ನ ಸನಿಹಕೆ ಚಿತ್ರದ ಕಥೆ.
ಚಿಕ್ಕಮಗಳೂರಿನ ಹುಡುಗಿ ಅಮೃತ @ ಡಿಂಪಿ (ಧನ್ಯಾ ರಾಮ್‍ಕುಮಾರ್-Shanya Ramkumar) ಬೆಂಗಳೂರಿಗೆ ಬಂದು ದಂತ ವೈದ್ಯೆಯಾಗಿರುತ್ತಾರೆ. ಹಾಗೇ ಶ್ರೀರಂಗಪಟ್ಟಣದ ಹುಡುಗ ಆದಿತ್ಯ @ ಆದಿ (ಸೂರಜ್ ಗೌಡ-Suraj Gowda) ಸಹ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಕೆಲಸದ ಹುಡುಕಾಟದಲ್ಲಿರುತ್ತಾನೆ. ಅದೇ ಸಮಯದಲ್ಲಿ ಇಬ್ಬರೂ ಎದುರು ಬದುರಾಗುತ್ತಾರೆ. ಆದಿತ್ಯನನ್ನು ಬಕ್ರಾ ಮಾಡಲು ಹೋಗಿ ತಾನೇ ಬಕ್ರಾ ಆಗುತ್ತಾಳೆ ಡಿಂಪಿ. ಅಲ್ಲಿಂದ ಇಬ್ಬರ ಗೆಳೆತನ ಶುರು. ಫೋನ್‍ನಲ್ಲಿ ಟಾಕಿಂಗ್, ವಾಟ್ಸಾಪ್‍ನಲ್ಲಿ ಚಾಟಿಂಗ್ ಮಾಡುತ್ತಾ ಇಬ್ಬರು ಮತ್ತೊಬ್ಬರ ಬಗ್ಗೆ ಹೆಚ್ಚು ತಿಳಿಯುತ್ತಾ ಹೋದಂತೆ, ಅವರಿಬ್ಬರ ಹಿನ್ನಲೆ ತೆರೆದುಕೊಳ್ಳುತ್ತದೆ. ಇಬ್ಬರದೂ ಒಂದೊಂದೆ ಆಸೆ, ಕನಸು, ಉದ್ದೇಶ.
ಕ್ರಮೇಣ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಆಗ ರೂಮ್ ಮೇಟ್ ಮದುವೆ ಫಿಕ್ಸ್ ಆಗುವ ಕಾರಣ, ಆದಿತ್ಯನಿಗೆ ಆ ಮನೆ ತೊರೆಯಬೇಕಾದ ಪರಿಸ್ಥಿತಿ. ಪಿಜಿ ಹುಡುಕಬೇಕು ಅನ್ನುತ್ತಾ ಈ ವಿಷಯವನ್ನು ಡಿಂಪಿಗೆ ತಿಳಿಸುತ್ತಾನೆ. ಡಿಂಪಿ ನನ್ನ ಜೊತೆಯಲ್ಲೇ ಬಂದಿರುವ ಖರ್ಚುಗಳನ್ನು ಶೇರ್ ಮಾಡಿಕೊಳ್ಳೋಣ ಎನ್ನುತ್ತಾಳೆ. ಹೀಗೆ ಒಂದೇ ಮನೆ ಸೇರುವ ಈ ಯುವಪ್ರೇಮಿಗಳು, ಹೊರ ಪ್ರಪಂಚಕ್ಕೆ ಕಸಿನ್ಸ್ ಎಂದು ಹೇಳಿಕೊಂಡಿರುತ್ತಾರೆ. ಹೊಸದಾಗಿ ಇಬ್ಬರೂ ಒಂದೇ ಮನೆ ಸೇರಿದಾಗ ಎಲ್ಲವೂ ಅದ್ಭುತ, ಅಮೋಘ. ಆದರೆ ದಿನಕಳೆದಂತೆ ಆರೋಪ, ಪ್ರತ್ಯಾರೋಪ, ಗಲಾಟೆ, ಜಗಳ, ಇತ್ಯಾದಿ ಶುರುವಾಗುತ್ತದೆ. ಎಲ್ಲ ಮಿತಿಮೀರಿದಾಗ ಬ್ರೇಕಪ್… ಡಿಂಪಿ ಮದುವೆ ಫಿಕ್ಸ್… ಆದಿತ್ಯ ದೇವದಾಸ್… ಮುಂದೆ? ಸಿನಿಮಾ ನೋಡಿ..!