ನಾಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಒಂದು ದಶಕದ ಕಾಲ ಬೆಳ್ಳಿ ತೆರೆ ಮೇಲೆ ಮಿಂಚಿ ಈಗಲೂ ದೊಡ್ಡ ಅಭಿಮಾನಿ ಬಳಗ ಹೊಂದಿರೋ ತಾರೆ ಅಂದ್ರೆ ಅದು ನಟಿ ರಮ್ಯಾ. ಸದ್ಯ ಕನ್ನಡದ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತ, ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಯಾವಾಗ ಮತ್ತೆ ಸಿನಿಮಾ ಮಾಡ್ತಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ನಾಗರಹಾವು ಸಿನಿಮಾ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿರುವ ಮೋಹಕ ತಾರೆ ರಮ್ಯಾ ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಸುಳಿವು ನೀಡಿದ್ದಾರೆ.
ರಮ್ಯಾ ಅನೌನ್ಸ್ಮೆಂಟ್: ಹೌದು, ಈ ಮಾತಿಗೆ ಪೂರಕವಾಗಿ ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ, ನಾಳೆ ಅಂದ್ರೆ ಗಣೇಶ ಹಬ್ಬಕ್ಕೆ ಬೆಳಗ್ಗೆ 11.15ಕ್ಕೆ ದೊಡ್ಡ ಅನೌನ್ಸ್ಮೆಂಟ್ ಇದೆಯೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಜೊತೆಗೆ ಹಲವು ಪ್ರಶ್ನೆಗಳು ಮೂಡಿವೆ.
ಚಿತ್ರಂಗದಿಂದ ರಮ್ಯಾ ಎಲ್ಲಿ ಹೋದರು, ಯಾವಾಗ ಮತ್ತೆ ಸಿನಿಮಾ ಮಾಡುತ್ತಾರೆ, ಸಿನಿಮಾ ಮಾಡೋದಾದ್ರೆ ಮುಂದಿನ ಸಿನಿಮಾ ಯಾವುದು, ಮದುವೆ ಬಗ್ಗೆ ಸುಳಿವು, ರಾಜಕೀಯ ಭವಿಷ್ಯವೇನು ಹೀಗೆ ಹತ್ತು ಹಲವು ಪ್ರಶ್ನೆಗಳು ರಮ್ಯಾ ಅವರ ಅಭಿಮಾನಿಗಳಲ್ಲಿದೆ. ನಾಳೆಯ ಘೋಷಣೆ ಬಗ್ಗೆ ಸಾಕಷ್ಟು ಕುತೂಹಲವನ್ನಿರಿಸಿಕೊಂಡಿದ್ದಾರೆ.
ರಮ್ಯಾ ಮುಂದಿನ ಸಿನಿಮಾ: ನಾಳೆ ರಮ್ಯಾ ಅವರ ಅನೌನ್ಸ್ಮೆಂಟ್ ಬಗ್ಗೆ ಅವರ ಆಪ್ತರ ಬಳಿ ವಿಚಾರಿಸಿದಾಗ ನಿಜವಾಗ್ಲೂ ಗುಡ್ ನ್ಯೂಸ್ ಸಿಕ್ಕಿದೆ. ರಮ್ಯಾ ಆಪ್ತರ ಪ್ರಕಾರ, ಸ್ಯಾಂಡಲ್ವುಡ್ ಕ್ವೀನ್ ಮತ್ತೆ ಆ್ಯಕ್ಟಿಂಗ್ ಜೊತೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕಟ್ಟುವ ಬಗ್ಗೆ ಅನೌನ್ಸ್ ಮಾಡಲಿದ್ದಾರಂತೆ. ಏನಿದ್ದರೂ ನಾಳೆಯ ಘೋಷಣೆ ಬಳಿಕವೇ ಎಲ್ಲವೂ ಖಚಿತವಾಗಲಿದೆ.
ಕೆಲವು ದಿನಗಳ ಹಿಂದೆ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೋಹಕ ತಾರೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ರಾಜ್ ಬಿ ಶೆಟ್ಟಿ ರಮ್ಯಾ ಅವರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.
ಮತ್ತೊಂದು ಖುಷಿ ವಿಚಾರ ಅಂದ್ರೆ ರಮ್ಯಾ ನಟಿಸುವುದರ ಜೊತೆಗೆ ಸ್ವತಃ ನಿರ್ಮಾಣ ಮಾಡುತ್ತಿರೋದು. ಈ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಕಾಲ ಕೂಡಿ ಬಂದಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.