ಟಿ-20 ವಿಶ್ವಕಪ್ (T20 World Cup) ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ (England) ವಿರುದ್ಧ ಭಾರತ (Team India) ಭರ್ಜರಿ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಬ್ಯಾಟಿಂಗ್ಗೆ ಇಳಿದ ಕೆ.ಎಲ್. ರಾಹುಲ್ (KL Rahul) ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅರ್ಧ ಶತಕ ಗಳಿಸಿ ಗಮನ ಸೆಳೆದಿದ್ದರು. ಮತ್ತೊಂದು ಬದಿಯಲ್ಲಿ ಇಶಾನ್ ಕಿಶನ್ (Ishan Kishan) ಸಹ ತಾನೇಉ ಕಡಿಮೆ ಇಲ್ಲ ಎಂಬಂತೆ ಬ್ಯಾಟ್ ಬೀಸಿದ್ದರು.
ಆದರೆ, ಕಳೆದ ಹಲವು ದಿನಗಳಿಂದ ರೋಹಿತ್ ಶರ್ಮಾ (Rohit Sharma) ಜೊತೆಗೆ ಟಿ20 ವಿಶ್ವಕಪ್ನಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡುವವರು ಯಾರು? ಎಂಬ ಪ್ರಶ್ನೆ ಉದ್ಭವವಾಗಿತ್ತು. ಕೆ.ಎಲ್. ರಾಹುಲ್ ಅಥವಾ ಇಶಾನ್ ಕಿಶನ್ ಈ ಇಬ್ಬರಲ್ಲಿ ಯಾರು? ಅರಂಭಿಕರು ಎಂಬ ಪ್ರಶ್ನೆ ಎದ್ದಿತ್ತು. ಒಂದು ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ತಾನೇ ಆರಂಭಿಕನಾಗಿ (Opening Batsman) ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದ್ದರು. ಆದರೆ, ಕೊನೆಗೂ ಈ ಪ್ರಶ್ನೆಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಸ್ವತಃ ವಿರಾಟ್ ಕೊಹ್ಲಿ (Virat Kohli) ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, “ನಾನು ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಇನ್ನಿಂಗ್ಸ್ ಆರಂಭಿಸುವುದಿಲ್ಲ. ಬದಲಾಗಿ ಮೂರನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಲಿದ್ದು, ರೋಹಿತ್ ಶರ್ಮಾ ಜೊತೆಗೆ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.