ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ…
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಅಭ್ಯರ್ಥಿಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪಷ್ಟಪಡಿಸಿದ್ದಾರೆ.
ಪ್ರಿಯಾಂಕ ಗಾಂಧಿ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅರ್ಥದಲ್ಲಿ ಪರೋಕ್ಷವಾಗಿ ಹೇಳಿಕೆ ನೀಡಿದ್ದರು.
ಇದೀಗ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿರುವ ಅವರು, ತಾವು ಶುಕ್ರವಾರ ನೀಡಿದ್ದ ಹೇಳಿಕೆಯು ಉತ್ಪ್ರೇಕ್ಷೆಯಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಯಾರು? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆಯವರ ಮುಖವನ್ನು ನೀವು ನೋಡುತ್ತೀದ್ದೀರಾ? ಎಲ್ಲ ಕಡೆಗಳಲ್ಲೂ ನನ್ನ ಮುಖವನ್ನು ನೋಡಬಹುದು ಎಂದು ಹೇಳಿದ್ದರು.
ಈ ಬಗ್ಗೆ ಉತ್ತರ ಪ್ರದೇಶದ ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು. ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪಕ್ಷಗಳು ಪ್ರಿಯಾಂಕ ಹೇಳಿಕೆಯನ್ನು ನಿನ್ನೆ ಗಂಭೀರವಾಗಿ ಪರಿಗಣಿಸಿದ್ದವು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿರುವ ಮತ್ತು ಎಲ್ಲಾ ಸಂವಹನಗಳಲ್ಲಿ ಪಕ್ಷದ ಮುಖವಾಗಿರುವ ಪ್ರಿಯಾಂಕಾ ಗಾಂಧಿ, ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಖಚಿತಪಟ್ಟಿಲ್ಲ.
ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಕೇಂದ್ರ ಕಚೇರಿಯಲ್ಲಿ ಸಹೋದರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಯುವ ಪ್ರಣಾಳಿಕೆಯನ್ನು ನಿನ್ನೆ ಬಿಡುಗಡೆ ಮಾಡಿದ್ದಾರೆ.