ಬಿಬಿಎಂಪಿ ಶಿಶುವಿಹಾರ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡಲಾಗುವುದು: ಪ್ರೀತಿ ಗೆಹ್ಲೋಟ್.

ಬೆಂಗಳೂರು: ಮಾ. 07: ಬಿಬಿಎಂಪಿ ಶಿಶುವಿಹಾರ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯನ್ನು ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಲು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ರವರು ಪೋಷಕರಲ್ಲಿ ಮನವಿ ಮಾಡಿದರು.ಬಿಬಿಎಂಪಿಯ ಶಿಕ್ಷಣ ಇಲಾಖೆ ವತಿಯಿಂದ ನಗರದ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ನಲ್ಲಿ ಇಂದು ಶಿಶುವಿಹಾರ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ನಡೆದ “ಚಿಣ್ಣರ ಚಿಲಿಪಿಲಿ ಕಲರವ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.ಪಾಲಿಕೆ ಶಿಶು ವಿಹಾರಗಳಲ್ಲಿ ಮಕ್ಕಳ ಕಲಿಕೆಗೆ ಅಗತ್ಯಚಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಪ್ರತಮ್ ಸಂಸ್ಥೆ ವತಿಯಿದ ಒಡಂಬಡಿಕೆ ಮಾಡಿಕೊಂಡ ನಂತರ ಮಕ್ಕಳ ವಿಕಸನದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ.ಪಾಲಿಕೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಕ್ಕಳ ಪ್ರತಿಭೆಯನ್ನು ಗುರುತಿಸಲು, ಶಿಕ್ಷಕರುಗಳನ್ನು ಪ್ರೋತ್ಸಾಹಿಸಲು, ಪೋಷಕರುಗಳಿಗೆ ಮಕ್ಕಳ ಭವಿಷ್ಯವನ್ನು ರೂಪಿಸುವ ಸಲುವಾಗಿ ಹಾಗೂ ಆತ್ಮ ವಿಶ್ವಾಸ ತುಂಬುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳ ಪ್ರತಿಭೆ ಅನಾವರಣ: ರಾಮಚಂದ್ರಪುರ ಪಾಲಿಕೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 4.5 ವರ್ಷದ ಮಗು ರಿತ್ವಿಕ್ ನಮ್ಮ ದೇಶ, ರಾಜ್ಯ, ರಾಜಧಾನಿ, ರಾಷ್ಟ್ರ ಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯ ಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಮುಖ್ಯ ಆಯುಕ್ತರು, ರಾಷ್ಟ್ರೀಯ ಲಾಂಛನ, ಹಣ್ಣು, ಹೂ, ಪ್ರಾಣಿ, ಧ್ವಜ, ನದಿ, ಮರ, ತರಕಾರಿ, ರಾಷ್ಟ್ರ ಗೀತೆ, ಸಂವಿಧಾನ ರಚಿಸಿದವರು, ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಸೇರಿದಂತೆ ಸಾಕಷ್ಟು ವಿಷಗಳನ್ನು ಕೇಳಿದ ಕೂಡಲೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಲ್ಲೂ ಬೆರಗು ಮೂಡಿಸಿದ. ಬಾಲಕ ರಿತ್ವಿಕ್ ಮಾತ್ರವಲ್ಲದೆ ಬೇರೆ ಮಕ್ಕಳು ಕೂಡಾ ತಮ್ಮ ಪ್ರತಿಭೆಗಳನ್ನು ತೋರಿಸಿದರು.
ಅಭಿನಂದನಾ ಪತ್ರಗಳ ವಿತರಣೆ: ಪಾಲಿಕೆಯ ಶಿಶುವಿಹಾರ ಶಾಲೆಗಳ ವ್ಯಾಸಂಗ ಮಾಡುತ್ತಿರುವ 100 ಮಕ್ಕಳು ಹಾಗೂ 152 ಶಿಕ್ಷಕರುಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಮಕ್ಕಳಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ: ಮಕ್ಕಳಲ್ಲಿರುವ ಇರುವ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಗೀತವಾಚನಾ, ಏಕಪಾತ್ರಾಭಿನಯ ಹಾಗೂ ಮಕ್ಕಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
93 ಶಿಶು ವಿಹಾರಗಳು: ಪಾಲಿಕೆಯಲ್ಲಿ 93 ಶಿಶುವಿಹಾರ ಶಾಲೆಗಳಲ್ಲಿದ್ದು, 5089 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಶುವಿಹಾರ ಶಾಲೆಗಳಲ್ಲಿ 34 ಖಾಯಂ ಹಾಗೂ 117 ಅತಿಥಿ ಶಿಕ್ಷಕರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಪೋಷಕರಿಂದ ಪ್ರಶಂಸೆ: ಪಾಲಿಕೆ ಶಿಶು ವಿಹಾರಗಳ ಕುರಿತು ಮಕ್ಕಳ ಪೋಷಕರು ಮಾತನಾಡಿ, ಮಕ್ಕಳಿಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಮಕ್ಕಳ ಭೌತಿಕ ವಿಕಾಸ, ಆಟಗಳು, ಮಾತುಗಾರಿಕೆ, ಚಿತ್ರಗಳನ್ನು ಬಿಡಿಸುವುದು, ಪದ್ಯಗಳನ್ನು ಹೇಳುವುದು, ಕಥೆಗಳನ್ನು ಹೇಳುವುದು, ಕನ್ನಡ ಭಾಷೆಯನ್ನು ಕಲಿಸಲಾಗುತ್ತಿದೆ. ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಇದರಿಂದ ಬಡ ವರ್ಗದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಅನಿಸಿಕೆಗಳನ್ನು ಸಂತಸದಿಂದ ವ್ಯಕ್ತಪಡಿಸಿದರು.ಈ ವೇಳೆ ಉಪ ನಿರ್ದೇಶಕರಾದ ಲೋಕೇಶ್, ಸಹಾಯಕ ಆಯುಕ್ತರಾದ ದಿಲೀಪ್, ಹಿರಿಯ ಸಹಾಯಕ ನಿರ್ದೇಶಕರಾದ ಮುನಿಶಾಮಪ್ಪ, ಶಿಕ್ಷಕರು, ಪೋಷಕರು, ಶಿಶು ವಿಹಾರ ಕೇಂದ್ರದ ಮಕ್ಕಳು ಉಪಸ್ಥಿತರಿದ್ದರು.