ನಾಗರಹಾವು ಚಿತ್ರದಂತೆ ಬೆಟ್ಟದಿಂದ ಜಿಗಿದು ಪ್ರೇಮಿಗಳ ಆತ್ಮಹತ್ಯೆ..!
ಕನಕಪುರ,ಸೆ.27-ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್‍ಸ್ಟಾರ್ ಅಂಬರೀಶ್ ನಟನೆಯ ನಾಗರಹಾವು ಸಿನಿಮಾ ಮಾದರಿಯಲ್ಲೇ ಪ್ರೀತಿ ದಕ್ಕದ ಇಬ್ಬರು ಭಗ್ನ ಪ್ರೇಮಿಗಳು ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಹಾವು ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ರಾಮಚಾರಿ ಹಾಗೂ ಮಾರ್ಗರೇಟ್ ಅವರು ಬೆಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬೇರೆ ಬೇರೆಯವರನ್ನು ವಿವಾಹವಾಗಿದ್ದ ಭಗ್ನಪ್ರೇಮಿಗಳು ಕಬ್ಬಾಳಮ್ಮ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಹಳೆ ಪ್ರೇಮಿಗಳನ್ನು ತಮಿಳುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕು ಉಗ್ರ್ಯಂ ಗ್ರಾಮದ ಚಂದನಾ(20) ಹಾಗೂ ಆಕೆಯ ಹಳೆಯ ಪ್ರಿಯತಮ ಸತೀಶ್‍ಕುಮಾರ್ (24) ಎಂದು ಗುರುತಿಸಲಾಗಿದೆ. ತಮ್ಮ ಊರಿನಿಂದ ನಾಪತ್ತೆಯಾಗಿದ್ದ ಚಂದನಾ ಮತ್ತು ಸತೀಶ್‍ಕುಮಾರ್ ನಾಲ್ಕು ದಿನಗಳ ಹಿಂದೆಯೇ ಕಬ್ಬಾಳು ಬೆಟ್ಟಕ್ಕೆ ಬಂದು ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬೆಟ್ಟದ ತಪ್ಪಲಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎರಡು ಶವಗಳನ್ನು ಕಂಡ ದನಗಾಯಿಗಳು ಪೆÇಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಸಾತನೂರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳನ್ನು ಚಂದನಾ ಮತ್ತು ಸತೀಶ್‍ಕುಮಾರ್ ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ:
ಚಂದನಾ ತಮ್ಮದೇ ಗ್ರಾಮದ ಸತೀಶ್ ಕುಮಾರ್ ಎಂಬಾತನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಆದರೆ, ಇವರ ಪ್ರೇಮಕ್ಕೆ ಮನೆಯವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಹಿರಿಯರ ಮಾತಿಗೆ ಮನ್ನಣೆ ನೀಡಿ ಚಂದನಾ ಪಕ್ಕದ ದೊಡ್ಡಮರಳಿಯ ಗಣೇಶ್ ಎಂಬಾತನನ್ನು ವಿವಾಹವಾಗಿದ್ದರು.
ಅದೇ ರೀತಿ ಪ್ರಿಯಕರ ಸತೀಶ್‍ಕುಮಾರ್ ಕೂಡ ಬೇರೆ ಯುವತಿಯನ್ನು ವಿವಾಹವಾಗಿದ್ದ. ಇಬ್ಬರೂ ಪ್ರೇಮಿಗಳು ಒಲ್ಲದ ಮನಸ್ಸಿನಿಂದ ಬೇರೆ ಬೇರೆಯವರನ್ನು ವಿವಾಹವಾಗಿದ್ದರೂ ಇಬ್ಬರ ಹೃದಯಗಳು ಮಾತ್ರ ಬೇರ್ಪಟ್ಟಿರಲಿಲ್ಲ.
ಹೀಗಾಗಿ ಒಲ್ಲದ ಮನಸ್ಸಿನವರೊಂದಿಗೆ ಜೀವನ ನಡೆಸುವುದಕ್ಕಿಂತ ಇಷ್ಟಪಟ್ಟವರೊಂದಿಗೆ ನೆಮ್ಮದಿಯಿಂದ ಸಾಯುವುದೇ ಲೇಸು ಎಂದು ತೀರ್ಮಾನಿಸಿಕೊಂಡ ಪ್ರೇಮಿಗಳು ಯಾರಿಗೂ ಗೊತ್ತಾಗದಂತೆ ಮನೆ ಬಿಟ್ಟು ಬಂದು ಕಬ್ಬಾಳಮ್ಮ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವತಿ ತಾಯಿ ರತ್ಮಮ್ಮ ನೀಡಿದ ದೂರಿನ ಮೇರೆಗೆ ಸಾತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.