ನರೇಗಾ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿದ ಜಿ.ಪಂ.ಸಿ.ಇ.ಓ
ಚಾಮರಾಜನಗರ:
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಎಂಬ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರು ತಮಗೆ ಅಗತ್ಯವಿರುವ ಕಾಮಗಾರಿಗಳ ಬೇಡಿಕೆಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಸಾರ್ವಜನಿಕರು ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮೋನ ರೋತ್ ರವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಹಳೆ ಕೆ.ಡಿ.ಪಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಪಡೆಯಲು ಉದ್ಯೋಗ ಚೀಟಿ ಹೊಂದಿರುವ ಕುಟುಂಬಕ್ಕೆ 5 ಲಕ್ಷ ರೂಗಳ ವರೆಗೂ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ಸ್ವಾವಲಂಬಿ ಬದುಕಿಗೆ ನರೇಗಾ ಯೋಜನೆಯು ಆಸರೆಯಾಗಿದ್ದು ಜಿಲ್ಲೆಯ ಗ್ರಾಮೀಣಭಾಗದ ಜನರು ಯೋಜನೆಯಡಿ ಹೆಚ್ಚಿನ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಿ ಬದುಕು ಕಟ್ಟಿಕೊಳ್ಳಲು ಸಹಕಾರವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿ ಪಿ ರವರು ಮಾತನಾಡಿ ಗ್ರಾಮೀಣಾಭಿವೃದ್ಧಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಪ್ರಮುಖ ಪಾತ್ರವಹಿಸಿದೆ. ಪ್ರಮುಖವಾಗಿ ಸಮಗ್ರಶಾಲೆ ಅಭಿವೃದ್ಧಿ, ವೈಯಕ್ತಿಕವಾಗಿ ತೋಟಗಾರಿಕೆ, ರೇಷ್ಮೆ, ಕೃಷಿ, ಅರಣ್ಯ ವಿಸ್ತರಣ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಹಕಾರ್ಯದರ್ಶಿ ಶ್ರೀಕಂಠರಾಜೇ ಅರಸು, ಎ.ಡಿ.ಪಿ.ಸಿ.ಸಮಂತ್, ಡಿ.ಐ.ಇ.ಸಿ ನಮೀನ್ ಎಂ.ಐ.ಎಸ್ ಸಹನ ಹಾಗೂ ನರೇಗಾ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.