ನನ್ನ ಸಾವಿಗೆ ಶಾಲಿನಿ ರಜನೀಶ್ ಕಾರಣ; ಡೆತ್‌ನೋಟ್ ಬರೆದಿಟ್ಟು ಸಿಬ್ಬಂದಿ ನಾಪತ್ತೆ
ಶಿವಮೊಗ್ಗ: ಕೆಲಸದ ಒತ್ತಡ, ಹಿರಿಯ ಅಧಿಕಾರಿಗಳ ಅಸಹಕಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಮಂಗಳವಾರ ನಾಪತ್ತೆಯಾಗಿದ್ದಾರೆ.
ಪ್ರಥಮ ದರ್ಜೆ ಸಹಾಯಕ ಗಿರಿರಾಜ್ (39) ಬೆಳಿಗ್ಗೆ ಮನೆಯಿಂದ ಹೊರಟವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಚೇರಿ ಸಹೋದ್ಯೋಗಿಗಳಿಗೆ ವಾಟ್ಸ್‌ಆಯಪ್ ಸಂದೇಶ ಕಳುಹಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರ ನಿಧಿಯ ನಿರ್ವಹಣಾ ವಿಭಾಗ ನೋಡಿಕೊಳ್ಳುತ್ತಿದ್ದರು.
‘ನನ್ನನ್ನು ಯಾರೂ ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಿದ್ದೇನೆ. ನನ್ನ ಸಾವಿಗೆ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ನೇರ ಕಾರಣ’ ಎಂದು ವಾಟ್ಸ್‌ಆಯಪ್ ಸಂದೇಶದಲ್ಲಿ ನಮೂದಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕೆಲಸದ ಒತ್ತಡ, ಸರ್ಕಾರಿ ವ್ಯವಸ್ಥೆಯಲ್ಲಿನ ಲೋಪ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಕೊರತೆ, ಕೆಲಸದ ಒತ್ತಡಗಳ ಮಧ್ಯೆ ಕುಟುಂಬದ ಸದಸ್ಯರಿಗೆ ಸಮಯ ನೀಡಲು ಸಾಧ್ಯವಾಗದಿರುವುದು. ಕೆಳ ಹಂತದ ಅಧಿಕಾರಿಗಳನ್ನು ಹೇಗೆ ಬಲಿಪಶು ಮಾಡಲಾಗುತ್ತದೆ ಎಂಬ ಅಂಶಗಳನ್ನು ಸವಿಸ್ತಾರವಾಗಿ ಬರೆದಿದ್ದಾರೆ.
ಸಂದೇಶ ನೋಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಕ್ಷಣ ಜಯನಗರ ಠಾಣೆಗೆ ದೂರು ನೀಡಿದ್ದಾರೆ.
‘ಗಿರಿರಾಜ್ ಅವರ ಮೊಬೈಲ್ ಭದ್ರಾವತಿ ತಾಲ್ಲೂಕು ಯಡೇಹಳ್ಳಿ ಸಮೀಪ ಸ್ವಿಚ್ಡ್ ಆಫ್ ಆಗಿದೆ. ಪತ್ತೆಗೆ ಪೊಲೀಸರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಮಾಹಿತಿ ನೀಡಿದರು.