
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ಗೆ (Ranya Rao) ದೊಡ್ಡ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧ ಕಠಿಣವಾದ ಕಾಫಿಪೊಸಾ ಕಾಯ್ದೆಯ ಅಡಿ ಬಂಧನದ ಆದೇಶ ಹೊರಡಿಸಿದೆ. ಆ ಮೂಲಕ ನಟಿಯ ಜಾಮೀನಿನ ನಿರೀಕ್ಷೆ ಮುರಿದು ಬಿದ್ದಿದೆ. ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ರನ್ಯಾ ವಿರುದ್ಧ ಕಾಫಿಪೊಸಾ ಹೊರಡಿಸಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗ್ರಹದಲ್ಲಿಯೇ ಬಂಧನದಲ್ಲಿ ಇಡುವಂತೆ ಆದೇಶಿಸಿದೆ.ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ತಡೆ ಕಾಯ್ದೆಯನ್ನು ಕಾಫಿಪೊಸಾ ಎನ್ನಲಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 3 (1) ರ ಅಡಿಯಲ್ಲಿ ನಟಿ ರನ್ಯಾ ರಾವ್ ವಿರುದ್ಧ ಬಂಧನದ ಆದೇಶವನ್ನು ಹೊರಡಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಬಂಧನದ ಆದೇಶ ಹೊರಡಿಸಿದಲ್ಲಿ ಆರೋಪಿಗೆ 3 ತಿಂಗಳಿಂದ ಒಂದು ವರ್ಷದ ವರೆಗೆ ಬಂಧನ ವಿಧಿಸಬಹುದಾಗಿರುತ್ತದೆ. ಹಾಗೂ ಒಂದು ವರ್ಷದ ಕಾಲ ಜಾಮೀನು ಸಹ ಸಿಗುವುದಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಎರಡು ವರ್ಷಗಳ ಕಾಲವೂ ಸಹ ಬಂಧನ ವಿಸ್ತರಣೆ ಮಾಡಬಹುದಾಗಿದೆ. ಈ ಪ್ರಕರಣದಲ್ಲಿ ಜಾಮೀನು ದೊರಕುವುದು ಬಹುತೇಕ ಅಸಾಧ್ಯ ಎನ್ನಲಾಗುತ್ತದೆ.ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಮೇಲೆ ಕಾಫಿಪೊಸಾ ಹೇರಲಾಗುತ್ತದೆ. ವಿದೇಶ ವಿನಿಮಯ ಅಥವಾ ಆರ್ಥಿಕ ಅಪರಾಧ ಎಸಗಿಸದವರ ಮೇಲೂ ಸಹ ಈ ಕಾಯ್ದೆ ಹೇರಲಾಗುತ್ತದೆ. ಈಗ ರನ್ಯಾ ಮೇಲೆ ಕಾಫಿಪೊಸಾ ಹೇರಲಾಗಿದ್ದು, ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತರುಣ್ ಮತ್ತು ಸಾಹಿಲ್ ಜೈನ್ ಅವರಿಗೂ ಸಹ ಇದರಿಂದ ಸಮಸ್ಯೆ ಎದುರಾಗಿದೆ.
ನಟಿ ರನ್ಯಾ ರಾವ್, ಮಾರ್ಚ್ ನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನದ ಸಮೇತ ಸಿಕ್ಕಿಬಿದ್ದಿದ್ದರು. ಡಿಆರ್ಐ ಇಲಾಖೆಯು ಇವರನ್ನು ಬಂಧಿಸಿತ್ತು. ಪ್ರಕರಣದ ತನಿಖೆ ನಡೆದಂತೆ ರನ್ಯಾ ರಾವ್ ಸುಮಾರು 49.6 ಕೆಜಿ ಅಕ್ರಮ ಚಿನ್ನ ಸಾಗಾಣೆ ಮಾಡಿರುವುದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕೆಲವರು ಸಹ ಪಾಲುದಾರರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ನಟಿ ರನ್ಯಾ ರಾವ್, ಪೊಲೀಸ್ ಇಲಾಖೆಯ ಕೆಲ ಅಧಿಕಾರಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡಿದ್ದರು.ನಟಿ ರನ್ಯಾ ರಾವ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದ ಜಾಮೀನು ಆದೇಶವನ್ನು ಕಾಯ್ದಿರಿಸಲಾಗಿದೆ. ಇದರ ನಡುವೆ ಇದೀಗ ಅವರ ಮೇಲೆ ಕಾಫಿಪೋಸಾ ಕಾಯ್ದೆ ಹೇರಲಾಗಿದೆ. ಇದರಿಂದಾಗಿ ನಟಿ ಇನ್ನೂ ಹಲವು ತಿಂಗಳು ಜೈಲಿನಲ್ಲಿಯೇ ಕಳೆಯಬೇಕಾದ ಸಾಧ್ಯತೆ ಬರಬಹುದಾಗಿದೆ.