ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ದೊಡ್ಡ ಸ್ಟಾರ್ಗಳು ಹಾಗೂ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕ ಪ್ರಕಟಿಸಿವೆ. ಅವುಗಳಲ್ಲಿ ಕೋಟಿಗೊಬ್ಬ 3 (Kotigobba3 ) ಸಿನಿಮಾ ಸಹ ಒಂದು. ಕಿಚ್ಚ ಸುದೀಪ್ (Kichcha Sudeep) ಅಭಿನಯದ ಕೋಟಿಗೊಬ್ಬ 3 ಸಿನಿಮಾ ಇದೇ ತಿಂಗಳ 14ರಂದು ಅಂದರೆ, ಮುಂದಿನ ಗುರುವಾರ ತೆರೆ ಕಾಣಲಿದೆ.
ಹೀಗಿರುವಾಗಲೇ ಚಿತ್ರತಂಡ ಸಿನಿಮಾದ ಪ್ರಚಾರದ ಜೊತೆಗೆ ರಿಲೀಸ್ಗೆ ಸಿದ್ಧತೆ ನಡೆಸಿದೆ. ಈಗಾಗಲೇ ಸೆನ್ಸಾರ್ ಮಂಡಳಿ ಈ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದ್ದು, ನಿನ್ನೆಯಷ್ಟೆ ಚಿತ್ರದ ಟ್ರೇಲರ್ (Kotigobba3 Trailer) ರಿಲೀಸ್ ಆಗಿದೆ. ನಿನ್ನೆ ಸಂಜೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ರಿಲೀಸ್ ಆಗಿರುವ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಿನಿಮಾ ಕಥೆಯ ಕುರಿತಾಗಿ ಸಾಕಷ್ಟು ಸುಳಿವು ಕೊಟ್ಟಿರುವ ಕೋಟಿಗೊಬ್ಬ 3 ಟ್ರೇಲರ್ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. 2.42 ನಿಮಿಷದ ಟ್ರೇಲರ್ ಆರಂಭವಾಗುವುದೇ ಆ್ಯಕ್ಷನ್ ಸೀಕ್ವೆನ್ಸ್ನಿಂದ. ಒಂದೆಡರು ದೃಶ್ಯಗಳ ನಂತರ ಕಿಚ್ಚ ಸುದೀಪ್ ಎಂಟ್ರಿ ಆಗುತ್ತದೆ.