
ವ್ಯಕ್ತಿಯೊಬ್ಬ ದಾಳಿ ನಡೆಸಿದ ಬಳಿಕ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನೀಡಲಾಗಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಝೆಡ್ ಶ್ರೇಣಿ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಇದೀಗ ಸಿಆರ್‌ಪಿಎಫ್ ಬದಲಾಗಿ ಮತ್ತೆ ದೆಹಲಿ ಪೊಲೀಸರೇ ಸಿಎಂಗೆ ಭದ್ರತೆ ನೀಡುತ್ತಿದ್ದಾರೆ.
ಆಗಸ್ಟ್ 20ರಂದು ಸಿಎಂ ರೇಖಾ ಗುಪ್ತಾ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸುತ್ತಿದ್ದಾಗ 35 ವರ್ಷದ ವ್ಯಕ್ತಿ ದಾಖಲೆಗಳೊಂದಿಗೆ ಬಂದು ಮಾತನಾಡುತ್ತಾ, ಇದ್ದಕ್ಕಿದ್ದಂತೆ ಕಪಾಳಕ್ಕೆ ಹೊಡೆದಿದ್ದ. ಈ ದಾಳಿಯನ್ನು ಸಿಎಂ ಕೊಲೆಗೆ ರೂಪಿಸಿದ ಯೋಚಿತ ಪಿತೂರಿ ಎಂದು ಅಧಿಕಾರಿಗಳು ತಿಳಿಸಿದ್ದರು.
ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ರೇಖಾ ಗುಪ್ತಾರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಿತ್ತು. ಸಿಆರ್‌ಪಿಎಫ್ ಸಿಬ್ಬಂದಿ ದೆಹಲಿ ಪೊಲೀಸರಿಂದ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ, ಇದೀಗ ವಾರದೊಳಗೆ ಮತ್ತೆ ದೆಹಲಿ ಪೊಲೀಸರು ಅವರ ಭದ್ರತೆಗೆ ಮುಂದಾಗಿದ್ದಾರೆ. ಸಿಆರ್‌ಪಿಎಫ್ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದ್ದು, ದೆಹಲಿ ಪೊಲೀಸರೇ ದೆಹಲಿ ಸಿಎಂಗೆ ಭದ್ರತೆ ಒದಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಆರ್‌ಪಿಎಫ್ ರಕ್ಷಣೆಯನ್ನು ವಿಸ್ತರಿಸುವ ಆದೇಶಗಳನ್ನು ಕೇಂದ್ರ ಸರ್ಕಾರ ಔಪಚಾರಿಕವಾಗಿ ಹೊರಡಿಸಬೇಕಾಗಿತ್ತು. ಆದರೆ ಯೋಜನೆಯಲ್ಲಿ ಬದಲಾವಣೆಯಾಗಿದ್ದು, ಅಂತಿಮವಾಗಿ ಹಿಂಪಡೆಯುವ ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಸಿಎಂ ಮೇಲೆ ಹಲ್ಲೆ ನಡೆಸಿದ ಸಂಬಂಧ ಇಲ್ಲಿಯವರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಗುಜರಾತ್‌ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್ ಖಿಮ್ಜಿಭಾಯಿ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿಯಾಗಿದ್ದಾನೆ.
ಮತ್ತೊಬ್ಬ ಆರೋಪಿ ತಹ್ಸೀನ್ ಸೈಯದ್ ಎಂಬಾತನನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಈತ ರಾಜೇಶ್ ಖಿಮ್ಜಿಗೆ ಹಣ ವರ್ಗಾಯಿಸಿದ್ದಾನೆ ಎಂಬ ಆರೋಪವಿದ್ದು, ಆತನ ಸ್ನೇಹಿತ ಎಂದು ತಿಳಿದು ಬಂದಿದೆ. ದೆಹಲಿ ಪೊಲೀಸರು ಬಂಧನಕ್ಕೂ ಮುನ್ನ ತಹ್ಸೀನ್‌ನನ್ನು ರಾಜ್‌ಕೋಟ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.
ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಆರೋಪಿಗಳ ವೈಯಕ್ತಿಕ ವಿವರಗಳ ಜೊತೆಗೆ ಭದ್ರತೆಯಲ್ಲಿ ಎದುರಾಗಿರುವ ಸಂಭಾವ್ಯ ಲೋಪಗಳನ್ನೂ ಗುರುತಿಸಲು ಮುಂದಾಗಿದ್ದಾರೆ. ಭದ್ರತಾ ದಾಖಲೆಗಳು, ಸಂದರ್ಶಕರ ನಮೂದುಗಳು ಮತ್ತು ನಿಯೋಜನೆ ದಾಖಲೆ ಹಾಗೂ ತಾಂತ್ರಿಕ ದಾಖಲೆಗಳೊಂದಿಗೆ ಪರಿಶೀಲಿಸಲಾಗುತ್ತಿದೆ.
ಸಾಮಾನ್ಯವಾಗಿ, ಸಿಎಂಗೆ ಇಪ್ಪತ್ತಕ್ಕೂ ಅಧಿಕ ಸಿಬ್ಬಂದಿಯ ಬೆಂಗಾವಲು, ಗಾರ್ಡ್ಸ್, ಚಾಲಕರು ಮತ್ತು ಬೆಂಗಾವಲು ವಾಹನಗಳು ಇರುತ್ತವೆ. ಪ್ರಾಣ ಬೆದರಿಕೆಯಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಗಣ್ಯರಿಗೆ ಮಾತ್ರ Z ಶ್ರೇಣಿಯ ಭದ್ರತೆ ಒದಗಿಸಲಾಗುತ್ತದೆ.