ದೆಹಲಿಯಲ್ಲಿ ಒಂದೇ ದಿನ 10 Omicron ಪ್ರಕರಣ ದಾಖಲು..!
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಒಂದೇ ದಿನ ಐದು ಓಮೈಕ್ರಾನ್ ಪ್ರಕರಣ ದಾಖಲಾದ ಮಾರನೇ ದಿನವೇ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ದೇಶದಲ್ಲಿ ಒಟ್ಟು 90 ಮಂದಿಯಲ್ಲಿ ಒಮೈಕ್ರಾನ್ ಸೋಂಕು ಕಂಡಿದೆ. ಇನ್ನು ಅರುಣಾಚಲ ಪ್ರದೇಶದಲ್ಲಿ(Arunachal pradesh) ಕೂಡ ಇಂದು ಹೊಸ ಪ್ರಕರಣ ದಾಖಲಾಗಿದೆ. ತೆಲಂಗಾಣದಲ್ಲೂ ನಾಲ್ಕು ಓಮೈಕ್ರಾನ್ ಪ್ರಕರಣ ದಾಖಲಾಗಿದ್ದು, ಗುಜರಾತ್ನಲ್ಲಿ ಒಂದು ಪ್ರಕರಣ ದಾಖಲಾಗಿದೆ.
11 ರಾಜ್ಯಗಳಲ್ಲಿ ಓಮೈಕ್ರಾನ್ ಸೋಂಕು
ಇಲ್ಲಿಯವರೆಗೆ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಓಮೈಕ್ರಾನ್ ಸೋಂಕು ಪ್ರಕರಣ ದಾಖಲಾಗಿದೆ. ಅದರಲ್ಲಿ ಮಹಾರಾಷ್ಟ್ರದಲ್ಲಿ 32 ಪ್ರಕರಣಗಳನ್ನು ಕಂಡು ಬಂದಿವೆ. ರಾಜಸ್ಥಾನದಲ್ಲಿ 17, ದೆಹಲಿಯಲ್ಲಿ ಈಗ 20, ಕರ್ನಾಟಕದಲ್ಲಿ ಎಂಟು ಸೋಂಕು ಪ್ರಕರಣ, ಗುಜರಾತ್ ಮತ್ತು ಕೇರಳ ತಲಾ ಎರಡು ಮತ್ತು ಐದು, ತೆಲಂಗಾಣ ಆರು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಚಂಡೀಗಢ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.
Omicron ಸೋಂಕು ಹೆಚ್ಚುತ್ತಿರುವ ಹಿನ್ನಲೆ ಹೊಸ ಪ್ರಯಾಣ ನಿಯಮಗಳನ್ನು ಅನುಸರಿಸಿ, ವಿಮಾನ ನಿಲ್ದಾಣಗಳಲ್ಲಿ ಬಿಗಿಯಾದ ನಿರ್ಬಂಧಗಳನ್ನು ಜಾರಿಗೆ ತರುವಂತೆ ಕೇಂದ್ರ ರಾಜ್ಯಗಳಿಗೆ ತಿಳಿಸಿದೆ. ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ಕೂಡ ಸಲಹೆ ನೀಡಿದೆ
ಗೋವಾದಲ್ಲಿ ಶುಕ್ರವಾರ ಯುಕೆಯಿಂದ ಮರಳಿದ್ದ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅವರಿಗೆ ಓಮೈಕ್ರಾನ್ ಸೋಂಕು ಒಳಗಾಗಿದ್ದಾರಾ ಎಂಬುದನ್ನು ತಿಳಿಯಲು ಅವರ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿದ್ದು, ವರದಿಗಾಗಿ ಸರ್ಕಾರ ಕಾಯುತ್ತಿದೆ
ದೇಶದಲ್ಲಿ ಕಳೆದ ನಾಲ್ಕುದಿನಗಳಿಂದ ಓಮೈಕ್ರಾನ್ ಪ್ರಕರಣಗಳು ಸತತ ಏರಿಕೆ ಕಾಣುತ್ತಿದೆ. ಈ ನಡುವೆ ಜನವರಿ ಮತ್ತು ಫೆಬ್ರವರಿಯಲ್ಲಿ ಸೋಂಕು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೂಡ ತಜ್ಞರು ಎಚ್ಚರಿಸಿದ್ದಾರೆ.
Omicron ಮುಂದಿನ ಎರಡು ತಿಂಗಳು ಅಧಿಕವಾಗುವ ಸಾಧ್ಯತೆ ಇದೆ. ಇದು ಹೆಚ್ಚು ಪ್ರಸರಣ ಹೊಂದಿದೆ. ಈ ಹಿನ್ನಲೆ ಜನವರಿ ಫೆಬ್ರವರಿಯಲ್ಲಿ ಸೋಂಕು ಅಧಿಕವಾಗಲಿದೆ. ಆದರೆ ಈ ಸೋಂಕು ಅಪಾಯಕಾರಿಯಲ್ಲ. ಡೆಲ್ಟಾಗಿಂತಲೂ ಅಪಾಯದ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಈ ಸೋಂಕು ಉಂಟುಮಾಡಲಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಮುಂದಿನ 2 ತಿಂಗಳುಗಳಲ್ಲಿ ಓಮೈಕ್ರಾನ್ ಪ್ರಕರಣಗಳಲ್ಲಿ ಏರಿಕೆ ನಿರೀಕ್ಷಿಸಲಾಗಿದೆ. ಅದು ಕ್ರಮೇಣ ಡೆಲ್ಟಾವನ್ನು ಹಿಂದಿಕ್ಕುತ್ತದೆ. ಆದರೆ, ಸೋಂಕುಗಳು ಆರೋಗ್ಯ ವ್ಯವಸ್ಥೆಯನ್ನು ಮುಳುಗಿಸುವುದಿಲ್ಲ ಎಂದು ಭಾರತದಲ್ಲಿನ ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ
ಕೋವಿಡ್ ಪ್ರಕರಣದಲ್ಲೂ ಹೆಚ್ಚಳ
ಇನ್ನು ದೇಶದಲ್ಲಿ ಇಳಿಕೆ ಕಂಡಿದ್ದ ಕೋವಿಡ್ ಸೋಂಕು ಕೂಡ ಏರಿಕೆ ಕಂಡಿದೆ. ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 7, 447 ಹೊಸ ಪ್ರಕರಣ ದಾಖಲಾಗಿದ್ದು, 391 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 86, 415 ಸಕ್ರಿಯ ಪ್ರಕರಣ ದಾಖಲಾಗಿದ್ದು, 3, 41, 63, 765 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಲಸಿಕಾಕರಣಕ್ಕೆ ವೇಗ ನೀಡಲಾಗಿದ್ದು, ಇದುವರೆಗೂ 1, 35, 99,96,267 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.