ವಿದೇಶ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶ್ವದ ಕಿರಿಯ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್‌ಝಾಯಿ ಮದುವೆ ಆಗಿದ್ದಾರೆ. ಬ್ರಿಟನ್​ನ ಬರ್ಮಿಂಗ್ ಹ್ಯಾಮ್​ನಲ್ಲಿರುವ ಅವರ ನಿವಾಸದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ವಿವಾಹ ನೆರವೇರಿದೆ. 24 ವರ್ಷದ ಮಲಾಲಾ ತನ್ನ ಸಂಗಾತಿ ಅಸ್ಸರ್ ಜೊತೆ ಮದುವೆಯಾಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ನನ್ನ ಜೀವನದಲ್ಲಿ ಬಹಳ ಮುಖ್ಯವಾದ ದಿನ. ಅಸ್ಸರ್ ಜೊತೆ ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಬರ್ಮಿಂಗ್‌ಹ್ಯಾಮ್‌ನಲ್ಲಿರುವ ನಮ್ಮ ಮನೆಯಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಾವು ಸಾಧಾರಣ ನಿಖಾ (ಮದುವೆ) ಸಮಾರಂಭವನ್ನು ನಡೆಸಿದ್ದೇವೆ. ನಿಮ್ಮೆಲ್ಲರ ಆಶೀರ್ವಾದವು ನಮ್ಮ ಮೇಲೆ ಇರಲಿ. ಪತಿ-ಪತ್ನಿಯಾಗಿ ಹೊಸ ಪಯಣದಲ್ಲಿ ಸಾಗುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಮಲಾಲಾ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್​​ನಲ್ಲಿ ತಮ್ಮ ಪತಿ ಅಸ್ಸರ್ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಮಲಾಲಾ ಹಂಚಿಕೊಂಡಿದ್ದಾರೆ.

ಮಲಾಲಾ ಯೂಸಫ್‌ಝಾಯಿ ಜುಲೈ 12, 1997 ರಂದು ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಸ್ವಾತ್ ಕಣಿವೆಯ ಅತಿದೊಡ್ಡ ನಗರವಾದ ಮಿಂಗೋರಾದಲ್ಲಿ ಜನಿಸಿದರು. ಅವರು ಜಿಯಾವುದ್ದೀನ್ ಮತ್ತು ಟಾರ್ ಪೆಕೈ ಯೂಸಫ್‌ಝಾಯಿ ಅವರ ಪುತ್ರಿ. ಮಿಂಗೋರ ಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ ಸ್ವಾತ್ ಕಣಿವೆಯಲ್ಲಿನ ಹುಡುಗಿಯರ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಪರ ತನ್ನ ಹೋರಾಟಕ್ಕಾಗಿ ಮಲಾಲಾ ಪ್ರಸಿದ್ಧಿ ಪಡೆದರು. ಮಲಾಲಾ ಯೂಸಫ್‌ಜೈ ಪಾಕಿಸ್ತಾನದಲ್ಲಿ ಸ್ತ್ರೀ ಶಿಕ್ಷಣದ ಮೇಲೆ ತಾಲಿಬಾನ್ ನಿರ್ಬಂಧಗಳನ್ನು ವಿರೋಧಿಸಿದ್ದಕ್ಕಾಗಿ 2012 ರ ಅಕ್ಟೋಬರ್ 9 ರಂದು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ದಿಂದ ಈಕೆಯ ಮೇಲೆ ಗುಂಡಿನ ದಾಳಿ ನಡೆಯಿತು. ಇದಕ್ಕೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಯಿತು. ಪಾಕಿಸ್ತಾನದಲ್ಲಿ, 2 ದಶಲಕ್ಷಕ್ಕೂ ಹೆಚ್ಚು ಜನರು ಶಿಕ್ಷಣ ಹಕ್ಕಿನ ಅರ್ಜಿಗೆ ಸಹಿ ಹಾಕಿದರು. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಮೊದಲ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಸೂದೆಯನ್ನು ಅಂಗೀಕರಿಸಿತು.

2012 ರಲ್ಲಿ ಪಾಕಿಸ್ತಾನ ಸರ್ಕಾರ ಆಕೆಗೆ ಮೊದಲ ರಾಷ್ಟ್ರೀಯ ಯುವ ಶಾಂತಿ ಪ್ರಶಸ್ತಿಯನ್ನು ನೀಡಿತು. ಡಿಸೆಂಬರ್ 2014 ರಲ್ಲಿ, ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತಳಾದರು. ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಮಲಾಲಾಳನ್ನು 2017 ರಲ್ಲಿ ವಿಶ್ವಸಂಸ್ಥೆಯ ಶಾಂತಿ ಸಂದೇಶವಾಹಕ ಹುದ್ದೆಗೆ ಮಲಾಲಾರನ್ನು ನೇಮಿಸಿದರು. ಇತ್ತೀಚೆಗೆ ಜೂನ್ 2020 ರಲ್ಲಿ ಮಲಾಲಾ ಯೂಸಫ್‌ಝಾಯಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

Related Articles

Leave a Reply

Your email address will not be published. Required fields are marked *

Back to top button