ದಸರಾ ರಜೆ ಬಳಿಕ ರಾಜ್ಯದಲ್ಲಿ 1-5 ನೇ ತರಗತಿ ಆರಂಭ?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿ ಶಾಲೆಗಳನ್ನು ದಸರಾ ನಂತರದಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಅಕ್ಟೋಬರ್ 10 ರಿಂದ 20 ರವರೆಗೆ ದಸರಾ ರಜೆ ಇದೆ. ದಸರಾ ರಜೆ ಬಳಿಕ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಈಗಾಗಲೇ 6 ರಿಂದ 12ನೇ ತರಗತಿವರೆಗೂ ಭೌತಿಕ ತರಗತಿ ಆರಂಭಗೊಂಡಿದ್ದು, ಪ್ರತಿನಿತ್ಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ 1-5 ನೇ ತರಗತಿ ಆರಂಭಿಸುವುದು ಸೂಕ್ತ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದೆ.
2021-22 ನೇ ಸಾಲಿನ ಶೈಕ್ಷಣಿಕ ಅವಧಿ ಪ್ರಕಾರ , ಅ.10 ರಿಂದ 20 ರವರೆಗೆ ದಸರಾ ರಜೆ ಇದೆ.ಈಗಾಗಲೇ ಖಾಸಗಿ ಶಾಲೆಗಳು ಮಧ್ಯವಾರ್ಷಿಕ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ಆರಂಭಿಸಿವೆ. ಪರೀಕ್ಷೆ ಮುಗಿದ ಬಳಿಕ ದಸರಾ ರಜೆ ಆರಂಭವಾಗಿ ಅ.21 ರಂದು ತರಗತಿ ಆರಂಭವಾಗಲಿವೆ. ಹೀಗಾಗಿ ಅ. 21 ರಿಂದಲೇ ರಾಜ್ಯದಲ್ಲಿ 1-5 ನೇ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.