ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಮಹಾರಾಷ್ಟ್ರದ ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು (ಐದು ಮತ್ತು ಆರನೇ ಮಾರ್ಗ) ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಲಿದ್ದಾರೆ. ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನಡೆಯಲಿದೆ. ಅಲ್ಲದೆ, ಮುಂಬೈ ಉಪನಗರ ರೈಲ್ವೆ ವಿಭಾಗದಲ್ಲಿ ಎರಡು ಉಪನಗರ ರೈಲುಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ನಂತರ ಪ್ರಧಾನಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಗುರುವಾರ ತಿಳಿಸಿದೆ. ಅಂದಾಜು 620 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಥಾಣೆ ಮತ್ತು ದಿವಾ ನಡುವಿನ ರೈಲು ಮಾರ್ಗಗಳು ಮುಂಬೈ ನಗರ ಸಾರಿಗೆ ಯೋಜನೆಯ ಭಾಗವಾಗಿದೆ. ಉಪನಗರ ಮತ್ತು ದೂರ ಪ್ರಯಾಣ ರೈಲುಗಳನ್ನು ಪ್ರತ್ಯೇಕಿಸಲು 2008ರಲ್ಲಿ ಈ ಹೊಸ ರೈಲು ಮಾರ್ಗಗಳಿಗೆ ಅನುಮೋದನೆ ನೀಡಲಾಗಿತ್ತು.
ರೈಲ್ವೆ ಮಾರ್ಗಗಳು 1.4 ಕಿಮೀ ರೈಲು ಮೇಲ್ಸೇತುವೆ, ಮೂರು ಪ್ರಮುಖ ಸೇತುವೆಗಳು, 21 ಸಣ್ಣ ಸೇತುವೆಗಳನ್ನು ಒಳಗೊಂಡಿವೆ. ಈ ಎರಡು ಮಾರ್ಗಗಳು ಮುಂಬೈನಲ್ಲಿ ಉಪನಗರ ರೈಲುಗಳ ಸಂಚಾರದೊಂದಿಗೆ ದೀರ್ಘ-ಪ್ರಯಾಣ ರೈಲುಗಳ ಸಂಚಾರದ ಅಡಚಣೆಯನ್ನು ನಿವಾರಿಸಬಹುದು ಎಂಬ ನಿರೀಕ್ಷೆಯಿದೆ. ಕಲ್ಯಾಣ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಇರುವ ನಾಲ್ಕು ಟ್ರ್ಯಾಕ್‌ಗಳಲ್ಲಿ, ಎರಡು ಟ್ರ್ಯಾಕ್‌ಗಳನ್ನು ನಿಧಾನವಾದ ಲೋಕಲ್ ಟ್ರೈನ್ಗಳಿಗೆ ಮತ್ತು ಎರಡು ಟ್ರ್ಯಾಕ್‌ಗಳನ್ನು ವೇಗದ ಲೋಕಲ್, ಮೇಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳಿಗೆ ಬಳಸಲಾಗಿದೆ.
ಈ ಹೊಸ ಮಾರ್ಗಗಳು ನಗರದಲ್ಲಿ 36 ಹೊಸ ಉಪನಗರ ರೈಲುಗಳನ್ನು ಪರಿಚಯಿಸಲು ಅನುವು ಮಾಡಿಕೊಡುತ್ತದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT)-ಕಲ್ಯಾಣ/ಕರ್ಜಾತ್ ಮತ್ತು ಕಾಸರ ನಡುವಿನ ಜನಸಂದಣಿಯನ್ನು ಕಡಿಮೆ ಮಾಡಲು ಸಾಧ್ಯವಾಗುವಂತೆ, ವರ್ಷಾಂತ್ಯದ ವೇಳೆಗೆ 80 ರಿಂದ 100 ಸ್ಥಳೀಯ ರೈಲು ಸೇವೆಗಳನ್ನು ಪ್ರಾರಂಭಿಸಲು ಈ ಹೊಸ ರೈಲು ಮಾರ್ಗಗಳು ಅನುಕೂಲ ಮಾಡಿಕೊಡುತ್ತವೆ ಎಂದು ಹೇಳಿಕೆ ತಿಳಿಸಿದೆ. ಹೊಸ ಮಾರ್ಗಗಳು ರೈಲು ಪ್ರಯಾಣದ ಸಮಯ ನಿರ್ವಹಣೆಯನ್ನು ಸುಧಾರಿಸಲು ಅನುಕೂಲಕರವಾಗಿದೆ ಎಂದೂ ತಿಳಿಸಲಾಗಿದೆ.
ಇಂದು ಪ್ರಧಾನಿ ಮೋದಿ- ಅಬುದಾಬಿಯ ಯುವರಾಜ ಮಾತುಕತೆ:
ಪ್ರಧಾನಿ ನರೇಂದ್ರ ಮೋದಿ ಮತ್ತು ಅಬುಧಾಬಿಯ ಯುವರಾಜ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಂದು ವರ್ಚುವಲ್ ಶೃಂಗಸಭೆಯನ್ನು ನಡೆಸಲಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದೆ. ಹಾಗೆಯೇ ಯುಎಇ ತನ್ನ ಸ್ಥಾಪನೆಯ 50 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಮಯದಲ್ಲಿ ಉಭಯ ದೇಶಗಳ ನಡುವಿನ ಐತಿಹಾಸಿಕ ಮತ್ತು ಸೌಹಾರ್ದ ಸಂಬಂಧಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಈರ್ವರೂ ವ್ಯಕ್ತಪಡಿಸುವ ನಿರೀಕ್ಷೆಯಿದೆ ಎಂದು ಎಂಇಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಭಾರತ- ಯುಎಇ ನಡುವೆ ದ್ವಿಪಕ್ಷೀಯ ಸಂಬಂಧಗಳು ಬಲಗೊಂಡಿವೆ. ಪ್ರಧಾನಿ ಮೋದಿ 2015, 2018 ಮತ್ತು 2019 ರಲ್ಲಿ ಯುಎಇಗೆ ಭೇಟಿ ನೀಡಿದ್ದರೆ, ಅಬುಧಾಬಿಯ ಯುವರಾಜ 2016 ಮತ್ತು 2017 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಕೊವಿಡ್ ಸಂಕಷ್ಟದ ಸಮಯದಲ್ಲಿ ಎರಡೂ ಕಡೆಯವರು ಆಹಾರ ಭದ್ರತೆ ಹಾಗೂ ಆರೋಗ್ಯ ಸುವ್ಯವಸ್ಥೆ ಬಗ್ಗೆ ಜತೆಯಾಗಿ ಕಾರ್ಯನಿರ್ವಹಿಸಿದ್ದರು.