ತೆರಿಗೆ ಪಾವತಿಸಲೇಬೇಕು, ಎಲ್ಲವನ್ನೂ ಪುಕ್ಸಟೆ ಕೊಡಲಾಗದು ಅದಕ್ಕೆ ‘ಅರ್ಥ’ವಿಲ್ಲ: ಡಿಕೆ ಶಿವಕುಮಾರ್ ವಾಸ್ತವದ ಮಾತು
ಬಿಬಿಎಂಪಿ ತೆರಿಗೆ ವಿಚಾರದಲ್ಲಿ ಕೆಲವು ಸಮಸ್ಯೆಗಳಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಾನೂನು ಪರಿಮಿತಿಯೊಳಗೆ ಸಾಧ್ಯವಾದಷ್ಟು ತೆರಿಗೆ ಕಡಿಮೆ ಮಾಡುತ್ತೇವೆ. ಹಾಗೆಂದು ಎಲ್ಲವನ್ನೂ ಪುಕ್ಸಟೆ ಕೊಡಲಾಗದು, ಅದಕ್ಕೆ ಅರ್ಥವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದರು. ನಗರ ವ್ಯಾಪ್ತಿಯ ಮಲ್ಲೇಶ್ವರ, ಚಾಮರಾಜಪೇಟೆ, ಗಾಂಧಿನಗರ ಜನರ ಸಮಸ್ಯೆ ಆಲಿಸಲು ಆಯೋಜಿಸಿರುವ ‘ಜನಸ್ಪಂದನ ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾತ್ರಿ 10 ಗಂಟೆಯಾಗಲಿ, ನಿಮ್ಮ ಸಮಸ್ಯೆಗಳನ್ನು ಆಲಿಸಿಯೇ ನಿರ್ಗಮಿಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ದಯವಿಟ್ಟು ನೋಂದಾಯಿಸಿಕೊಳ್ಳಿ. ನನಗೆ ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ನಮ್ಮ ಅಧಿಕಾರಿಗಳು ಸಹಕಾರ ಕೊಡದಿದ್ದಕ್ಕೆ ನನ್ನ ಬಳಿ ಬಂದಿದ್ದೀರಿ ಎಂದರು.
ಈಗಾಗಲೇ 13 ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಇವತ್ತು 3 ಕ್ಷೇತ್ರಗಳ ಸಮಸ್ಯೆ ಕೇಳಲು ಬಂದಿದ್ದೇನೆ. ದಯವಿಟ್ಟು ನಿಮ್ಮ ಸಮಸ್ಯೆಗಳನ್ನ ನೋಂದಣಿ ಮಾಡಿಸಿಕೊಳ್ಳಿ. ನಿಮಗೆ ಫೋನ್ ಮಾಡಲು ಪ್ರತ್ಯೇಕ ತಂಡ ರಚಿಸಿದ್ದೇನೆ. ಅವರು ನಿಮಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುತ್ತಾರೆ. ಅದಕ್ಕೆ ನಮ್ಮ ಸ್ಥಳೀಯ ಶಾಸಕರು, ಅಧಿಕಾರಿಗಳ ಜೊತೆ ಬಂದಿದ್ದೇನೆ. ಟ್ಯಾಕ್ಸ್ ವಿಚಾರದಲ್ಲಿ ಒಂದು ಸಮಸ್ಯೆಯಿದೆ. ಬಿಜೆಪಿ ನಾಯಕರು ಅದನ್ನ ಗಮನಿಸಿದ್ದೀರಿ ಅಂದುಕೊಂಡಿದ್ದೇನೆ. ಟ್ಯಾಕ್ಸ್ ಮೂಲಕ ಆದಾಯ ಹೆಚ್ಚು ಮಾಡಬೇಕು ಎಂದು ಯೋಜನೆ ಬಿಬಿಎಂಪಿಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದೆವು. ಈ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿಯವರು ಕೂಡ ಪತ್ರ ಬರೆದಿದ್ದರು. ಈಗ ಬಿಜೆಪಿ ನಾಯಕ ಅಶ್ವತ್ಥನಾರಾಯಣ್ ಕೂಡ ಗಮನಕ್ಕೆ ತಂದಿದ್ದಾರೆ. ನಿಮಯಗಳಿಗೆ ತಿದ್ದುಪಡಿ ತರಬೇಕಿದೆ ಎಂದು ಅವರು ಹೇಳಿದರು.
30 – 40 ಸೈಟ್ ಇರುವವರಿಗೆ, ಬಡವರಿಗೆ ರಿಯಾಯಿತಿ ಕೊಡಬೇಕೆಂಬ ಚಿಂತನೆ ಇದೆ. ಒಂದಷ್ಟು ರಿಯಾಯಿತಿ ಕೊಟ್ಟು ನಿಯಮದಲ್ಲಿ ತುಸು ಸಡಿಲ ಮಾಡಬೇಕೆಂದುಕೊಂಡಿದ್ದೇವೆ. ಬಡವರಿಗೆ ಸಮಸ್ಯೆಯಾಗದಂತೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕೂಡ ಟ್ಯಾಕ್ಸ್ ಬಗ್ಗೆ ಗಾಬರಿಯಾಗಬೇಡಿ . ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಲು ಯತ್ನಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು.
2020 ರಲ್ಲಿ ಬಿಬಿಎಂಪಿ ಏನು ಕಾಯ್ದೆ ಮಾಡಿದೆ ಎಂಬುದಾಗಿ ಗಮನಿಸುತ್ತೇನೆ. ಬೆಂಗಳೂರು ದಕ್ಷಿಣ, ಹೆಬ್ಬಾಳದಲ್ಲಿ ಟ್ಯಾಕ್ಸ್ ಸಮಸ್ಯೆ ಇದೆ ಎಂದು ರಾಮಲಿಂಗರೆಡ್ಡಿ ಸಹ ಪತ್ರ ಬರೆದಿದ್ದಾರೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡುತ್ತೇವೆ. ಶೆಡ್, ಶೀಟ್ ಕಟ್ಟಿಕೊಟ್ಟಿರುವವರ ಬಗ್ಗೆ ಗಮನ ಹರಿಸುತ್ತೇವೆ. ಟ್ಯಾಕ್ಸ್ ಎಷ್ಟು ಕಡಿಮೆ ಮಾಡಲು ಸಾಧ್ಯವೋ ಅಷ್ಟು ಮಾಡುತ್ತೇವೆ. ಒಂದು ಅಂತಸ್ತು ಅಂತ ತೋರಿಸಿ ಮೂರು ಅಂತಸ್ತು ಮನೆ ಕಟ್ಟೋದು, ಟ್ಯಾಕ್ಸ್ ಕಟ್ಟದೇ ಇರೋದು ತಪ್ಪು. ಖಾತೆ ಯಾರ ಹೆಸರಲ್ಲಿದೆಯೇ ಅವರಿಗೆ ಉಚಿತವಾಗಿ ದಾಖಲೆಗಳನ್ನು ನೀಡಲು ಮುಂದಾಗುತ್ತೇವೆ. ಎಸ್ಎಂ ಕೃಷ್ಣ ಅವರ ಆಡಳಿತ ಕಾಲದಲ್ಲಿ ನಾವು 5 ರೂ. ಗೆ ಪಹಣಿ ಕೊಡುವ ಕೆಲಸ ಮಾಡಿದ್ದೆವು. ಹಿಂದಿನ ಸರ್ಕಾರ 1 ಲಕ್ಷ ವಸತಿ ಮನೆಗಳನ್ನು ಘೋಷಿಸಿ ಕೊಟ್ಟಿಲ್ಲ. ಎಲ್ಲವನ್ನೂ ಪುಕ್ಸಟೆ ಕೊಡಲು ಆಗದು. ಹಾಗೆ ಕೊಟ್ಟರೆ ಅದಕ್ಕೆ ಅರ್ಥ ಇರುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.