ತುಷ್ಟೀಕರಣದಿಂದ ಸಂತುಷ್ಟಿ ಕಡೆಗೆ ದೇಶ ಮುನ್ನಡೆಸಿ: ಬಿಜೆಪಿ ನಾಯಕರಿಗೆ ಮೋದಿ ಕರೆ
ತುಷ್ಟೀಕರಣ ನೀತಿಯಿಂದಾಗಿ ಭಾರತಕ್ಕೆ ಹಲವು ಸಮಸ್ಯೆಗಳು ಕಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ತುಷ್ಟೀಕರಣದಿಂದ ಸಂತುಷ್ಟಿ ಕಡೆಗೆ ದೇಶವನ್ನು ಮುನ್ನಡೆಸಬೇಕೆಂದು ಬಿಜೆಪಿ ನಾಯರಿಗೆ ಕರೆ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈ ವಿಚಾರ ತಿಳಿಸಿದರು. ಕಾರ್ಯಕಾರಿಣಿ ಸಭೆಯ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ.
“ದೇಶ ಮೊದಲು ಎನ್ನುವ ಏಕೈಕ ವಿಚಾರಧಾರೆ ನಮ್ಮದು. ದೇಶ ಮೊದಲು ಎನ್ನುವುದು ನಮಗಿರುವ ಏಕೈಕ ಕಾರ್ಯಕ್ರಮ. ತುಷ್ಟೀಕರಣ ನೀತಿಯನ್ನು ಅಂತ್ಯಗೊಳಿಸಿ ಸಂತುಷ್ಟಿಯ ಕಡೆಗೆ ಸಾಗುವ ಮಾರ್ಗ ಆಯ್ದುಕೊಂಡಿದ್ದೇವೆ,” ಎಂದು ನರೇಂದ್ರ ಮೋದಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ ಕಾರ್ಯಕಾರಿಣಿ ಸಭೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
“ಪಕ್ಷದ ಅಭಿವೃದ್ಧಿ ಗುರಿಗಳು, ಕಳೆದ 8 ವರ್ಷಗಳಲ್ಲಿ ನಡೆದ ಜನಪರ ಕಾರ್ಯಕ್ರಮಗಳು ಹಾಗು ಜನರ ಜೊತೆ ಇನ್ನಷ್ಟು ಆಳದ ಸಂಪರ್ಕ ಸಾಧಿಸುವ ಬಗೆ ಹೇಗೆ ಎಂಬುದು ಸೇರಿ ಹಲವು ವಿಚಾರಗಳ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದೆವು,” ಎಂದು ನರೇಂದ್ರ ಮೋದಿ ತಿಳಿಸಿದ್ಧಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಶನಿವಾರ ಆರಂಭವಾಗಿ ಇಂದು ಭಾನುವಾರ ಮುಕ್ತಾಯಗೊಂಡಿತು. ನರೇಂದ್ರ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಮೊದಲಾದ ಅನೇಕರು ಪಾಲ್ಗೊಂಡಿದ್ದರು.
ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ಝಂಡಾ
ಬಿಜೆಪಿಗೆ ಅಭೇದ್ಯದ ಕೋಟೆಗಳೆನಿಸಿದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ಸರಕಾರ ರಚಿಸುತ್ತೇವೆ ಎಂದೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಹೊರಡಿಸಲಾಗಿದೆ.
ಬಿಜೆಪಿಯ ಅಭಿವೃದ್ಧಿ ಮತ್ತು ಕಾರ್ಯಸಾಧನೆಯ ರಾಜಕಾರಣವನ್ನು ಜನರು ಒಪ್ಪಿಕೊಂಡಿದ್ದಾರೆ ಎಂದ ಗೃಹ ಸಚಿವ ಅಮಿತ್ ಶಾ, ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಮತ್ತು ಆಮಿಷ ರಾಜಕಾರಣವನ್ನು ಅಂತ್ಯಗೊಳಿಸಬೇಕೆಂದು ಕರೆ ನೀಡಿದರು. ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಕುಟುಂಬ ರಾಜಕಾರಣಕ್ಕೆ ಬಿಜೆಪಿ ತೆರೆ ಎಳೆಯುತ್ತದೆ ಎಂದೂ ಅವರು ಸಭೆಯಲ್ಲಿ ಹೇಳಿದರೆನ್ನಲಾಗಿದೆ.
ಅಮಿತ್ ಶಾ ಭಾಷಣ
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತುಷ್ಟೀಕರಣ ನೀತಿಯನ್ನು ಟೀಕಿಸಿದರು. ಉದಯಪುರ್, ಅಮ್ರಾವತಿಯಲ್ಲಿ ನಡೆದ ಹಿಂದೂಗಳ ಹತ್ಯೆ ಘಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅಮಿತ್ ಶಾ, ತುಷ್ಟೀಕರಣ ನೀತಿಯ ಪರಿಣಾಮ ಇದು ಎಂದಿದ್ಧಾರೆ. ತುಷ್ಟೀಕರಣದ ನೀತಿ ಅಂತ್ಯಗೊಂಡರೆ ಕೋಮುವಾದವೂ ಕೊನೆಗೊಳ್ಳುತ್ತದೆ ಎಂದು ಅಮಿತ್ ಶಾ ಹೇಳಿದರು.
ಈಶಾನ್ಯ ರಾಜ್ಯಗಳಲ್ಲಿ ಮನೆ ಮಾಡಿರುವ ಎಲ್ಲಾ ಸಮಸ್ಯೆಗಳಿಗೂ ಇನ್ನೆರಡು ವರ್ಷದಲ್ಲಿ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುತ್ತಾ, “ಸಿಎಎ ಒಳಗೊಂಡಂತೆ ಮೋದಿ ಸರಕಾರ ಜಾರಿಗೆ ತರಬೇಕೆಂದಿರುವ ಹಲವು ಸುಧಾರಣಾ ಕ್ರಮಗಳಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ನಿಮಗೆ ಗೊತ್ತು. ಸಿಎಎ ಜಾರಿಯಾಗುವುದು ವಿಳಂಬವಾಗಿದೆ. ಆದರೆ, ಈ ಕಾಯ್ದೆ ಜಾರಿಗೆ ಸರಕಾರ ಬದ್ಧವಾಗಿದೆ. ಶೀಘ್ರದಲ್ಲೇ ನಿಯಮ ರೂಪಿಸಲಾಗುವುದು” ಎಂದು ಹಿಮಂತ ಬಿಸ್ವ ಶರ್ಮಾ ಅವರು ಅಮಿತ್ ಷಾ ನೀಡಿದ ಹೇಳಿಕೆಯನ್ನು ವಿವರಿಸಿದ್ದಾರೆ.