ಸುದ್ದಿ

ತುಮಕೂರು: ಕೋವಿಡ್ ನಿಂದಲೇ ಕುಪ್ಪೂರು ಗದ್ದುಗೆ ಮಠದ ಶ್ರೀಗಳ ಸಾವು, ವೈದ್ಯಾಧಿಕಾರಿಗಳಿಗೆ ಡಿಎಚ್‌ಒ ನೋಟಿಸ್

ತುಮಕೂರು: ಕುಪ್ಪೂರು ಗದ್ದುಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮಿ (47 ವರ್ಷ) ಕೋವಿಡ್ -19 ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಎಂ ಬಿ ನಾಗೇಂದ್ರಪ್ಪ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ ಎಂ ಬಿ ನಾಗೇಂದ್ರಪ್ಪ ಅವರು ತುಮಕೂರಿನ ಚಿಕ್ಕನಾಯಕನಹಳ್ಳಿಯ ಖಾಸಗಿ ನರ್ಸಿಂಗ್ ಹೋಂನ ಅವ್ಯವಹಾರಗಳ ಬಗ್ಗೆ ತನಿಖೆ ಕೈಗೊಂಡಿದ್ದು, ಶ್ರೀಗಳ ಸಾವಿಗೆ ಕೋವಿಡ್ ಸೋಂಕು ಕಾರಣ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರ ಸೂಚನೆ ಮೇರೆಗೆ ಡಿಎಚ್‌ಒ ಸಮಗ್ರ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 23 ರಂದು ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯರು, ಅವರು ಕೋವಿಡ್‌ನಿಂದ ಬಳಲುತ್ತಿದ್ದಾರೆಯೇ ಎಂದು ಪತ್ತೆಹಚ್ಚಲು ವಿಫಲರಾಗಿದ್ದರು. ನಂತರ ಶ್ರೀಗಳು ಮಠಕ್ಕೆ ಮರಳಿದ್ದರು. ಆದರೆ ಮರುದಿನ, ಶ್ರೀಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಆವರನ್ನು ಸಿದ್ದಗಂಗಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಅವರು ದಾರಿ ಮಧ್ಯೆಯೇ ನಿಧನರಾಗಿದ್ದರು.

ವೈದ್ಯಾಧಿಕಾರಿಗಳಿಗೆ ಡಿಎಚ್‌ಒ ನೋಟಿಸ್
ಆರಂಭದಲ್ಲೇ ಶ್ರೀಗಳ ಸೋಂಕು ಪತ್ತೆ ಹಚ್ಚುವಲ್ಲಿ ವೈದ್ಯರು ವಿಫಲರಾಗಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆಯದ ಕಾರಣ ಶ್ರೀಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದೀಗ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ಎಂ ಬಿ ನಾಗೇಂದ್ರಪ್ಪ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣ ಚಿಕಿತ್ಸೆ ದೊರೆಯದೆ, ರೋಗದ ಗುಣ ಲಕ್ಷಣಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡದ ಸ್ಥಳೀಯ ಖಾಸಗಿ ವೈದ್ಯರಿಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 23 ಹಾಗೂ 24ರಂದು ಸ್ವಾಮೀಜಿ ಮಠದಲ್ಲಿ ಕೆಮ್ಮು ಹಾಗೂ ರೋಗದ ಗುಣಲಕ್ಷಣಗಳು ಇದ್ದರೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಸ್ವಾಮೀಜಿಯವರ ದೇಹದಲ್ಲಿ ಕಾಣಿಸಿದ್ದ ಸೋಂಕಿನ ಕುರಿತು ಸ್ಥಳೀಯ ವೈದ್ಯರು ಪತ್ತೆ ಮಾಡದೆ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಡಾ. ನಾಗೇಂದ್ರಪ್ಪ, ಸೆ.23ರಂದು ಸ್ವಾಮೀಜಿ ಕೊರೊನಾ ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದರೂ ಅವರಿಗೆ ಅರಿವಿಗೆ ಬಂದಿರಲಿಲ್ಲ. ಅಲ್ಲದೇ ಸ್ಥಳೀಯ ಖಾಸಗಿ ಕ್ಲಿನಿಕ್​​ನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಆದರೆ, ವೈದ್ಯರು ಸಾಮಾನ್ಯ ಜ್ವರ ಎಂಬಂತೆ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಸ್ವಾಮೀಜಿ ವಾಪಸ್ ಮಠಕ್ಕೆ ತೆರಳಿ ತಮ್ಮ ಎಂದಿನ ಪೂಜಾ ವಿಧಿ-ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದರು. ಸೆ.24ರಂದು ಸೋಂಕು ದೇಹದಲ್ಲಿ ವ್ಯಾಪಿಸಿ ಉಸಿರಾಟದ ತೊಂದರೆ ಕಾಣಿಸಿತ್ತು. ಹೀಗಾಗಿ, ತಕ್ಷಣ ಚಿಕಿತ್ಸೆಗಾಗಿ ಮಠದ ಭಕ್ತರು ತುಮಕೂರಿನ ಶ್ರೀ ಸಿದ್ಧಗಂಗಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಅವರ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಯಿತು. ಅವರ ದೇಹದಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಅಷ್ಟೊತ್ತಿಗಾಗಲೇ ಅವರ ಲಂಗ್ಸ್ ಸೇರಿ ದೇಹದ ಬಹುತೇಕ ಕಡೆ ಸೋಂಕು ವ್ಯಾಪಿಸಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸೇರಿದಂತೆ ಮಠದ ಭಕ್ತರು ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಸೆ.25ರಂದು ಬೆಳಗ್ಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸ್ವಾಮೀಜಿ ಅಸುನೀಗಿದ್ದರು ಎಂದು ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button