ರಾಜ್ಯಸುದ್ದಿ

ಡಿ.1 ರಿಂದ ಆಟೋ ಪ್ರಯಾಣ ದುಬಾರಿ.

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರವನ್ನು ಕನಿಷ್ಠ 25 ರೂ. ನಿಂದ 30 ರೂ.ಗಳಿಗೆ ಹೆಚ್ಚಳ ಮಾಡಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಈಗಾಗಲೇ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಬುಧವಾರದಿಂದ (ಡಿ. 1) ಜಾರಿಗೆ ಬರಲಿದೆ.

ಆಟೊಗಳಲ್ಲಿ ಓಡಾಡುವ ಪ್ರಯಾಣಿಕರು ಬುಧವಾರದಿಂದ 5 ರೂ. ಹೆಚ್ಚಿನ ದರ ಪಾವತಿಸಿ ಪ್ರಯಾಣಿಸಬೇಕಿದೆ. ಕನಿಷ್ಠ ಪ್ರಯಾಣ ದರವನ್ನು ಮೊದಲ 2 ಕಿ.ಮೀ.ಗೆ 5 ರೂ., ಆನಂತರದ ಪ್ರತಿ ಕಿ.ಮೀ.ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಲಗೇಜು ದರವನ್ನು 2 ರೂ. ನಿಂದ 5 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೊದಲು ಕನಿಷ್ಠ ಪ್ರಯಾಣ ದರವು 1.9 ಕಿ.ಮೀ. ಗೆ 25 ರೂ., ಆನಂತರದ ಪ್ರತಿ ಕಿ.ಮೀ.ಗೆ 13 ರೂ. ಇತ್ತು. ಇದೀಗ ಆ ದರವನ್ನು ಕ್ರಮವಾಗಿ 30 ರೂ. ಮತ್ತು 15 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ಲಗೇಜು ದರವನ್ನು ಮೊದಲ 20 ಕೆ.ಜಿ.ಯಿಂದ ನಂತರದ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ ವಿಧಿಸುತ್ತಿದ್ದ ದರವನ್ನು 2 ರೂ. ನಿಂದ 5 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಉಳಿದಂತೆ ರಾತ್ರಿ ಪ್ರಯಾಣ ದರ, ಕಾಯುವಿಕೆ ದರದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ.

ಪ್ರಾಧಿಕಾರವು 2013ರ ಡಿ. 17ರಂದು ಆಟೊ ಪ್ರಯಾಣ ದರ ಏರಿಕೆ ಮಾಡಿತ್ತು. ಆನಂತರ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ, ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಗಳು ದರ ಹೆಚ್ಚಳಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದವು. ಹೊಸ ಆಟೊ ಬೆಲೆ, ನೋಂದಣಿ ಶುಲ್ಕ, ಅರ್ಹತಾ ಪತ್ರ ನವೀಕರಣ, ಎಲ್‌ಪಿಜಿ ಗ್ಯಾಸ್‌, ಬಿಡಿಭಾಗಗಳ ಬೆಲೆ ದುಪ್ಪಟ್ಟಾಗಿದೆ. ಮನೆ ಬಾಡಿಗೆ, ದಿನಬಳಕೆ ವಸ್ತುಗಳು, ಮಕ್ಕಳ ಶಿಕ್ಷಣ ಶುಲ್ಕವೂ ಜಾಸ್ತಿಯಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಆದ ಕಾರಣ, ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಟೊ ಪ್ರಯಾಣ ದರ ಪರಿಷ್ಕರಣೆ ಸಂಬಂಧ ಸಂಚಾರ ವಿಭಾಗದ (ಪೂರ್ವ) ಉಪ ಪೊಲೀಸ್‌ ಆಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಉಪ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಆಟೊರಿಕ್ಷಾ ಸಂಘಟನೆಗಳು, ಚಾಲಕರು ಹಾಗೂ ಸಾರ್ವಜನಿಕರ ಅಹವಾಲು ಆಲಿಸಿ, ವರದಿ ಸಲ್ಲಿಸಿತ್ತು.

ವರದಿಯಲ್ಲಿ ಮಾಡಿದ್ದ ಶಿಫಾರಸಿನಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಆಟೊ ಪ್ರಯಾಣ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಆಟೊದ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರವು ಮೀಟರ್‌ನಲ್ಲಿ ಪ್ರದರ್ಶಿತವಾಗುವಂತೆ 2022ರ ಫೆ. 28ರೊಳಗೆ ಪುನಃ ಸತ್ಯಾಪನೆ ಮಾಡಿ, ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಚಾಲಕರಿಗೆ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button