ಜೇಮ್ಸ್ ಚಿತ್ರದ ವಿಶೇಷ ಪಾತ್ರದಲ್ಲಿ ಶಿವಣ್ಣ, ರಾಘಣ್ಣ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ಜೇಮ್ಸ್. ಅವರು ನಿಧನ ಹೊಂದುವ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು ಕೊನೆಯ ಹಂತ ತಲುಪಿತ್ತು. ಇದು ಪುನೀತ್ ಅಭಿನಯದ ಕೊನೆಯ ಚಿತ್ರ ಕೂಡ ಹೌದು.
ಇದೀಗ ಚಿತ್ರತಂಡ ಅವರ ಅಗಲುವಿಕೆಯ ನೋವಿನಲ್ಲಿ ಚಿತ್ರೀಕರಣ ಮುಗಿಸಿದೆ. ಚೇತನ್ ಕುಮಾರ್ ನಿರ್ದೇಶನದ ಕಿಶೋರ್ ಪತಿಕೊಂಡ ನಿರ್ಮಾಣದ ಈ ಚಿತ್ರದಲ್ಲಿ ಅವರ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ತಮ್ಮನಿಗೆ ಗೌರವ ಸೂಚಿಸಿದ್ದಾರೆ, ಅಲ್ಲದೆ ಭಾವನಾತ್ಮಕತೆಯನ್ನು ತೋರಿಸಿದ್ದಾರೆ.
ಪುನೀತ್ ಭೌತಿಕವಾಗಿ ಅಗಲಿದರೂ ಭಾವನಾತ್ಮಕವಾಗಿ ಎಲ್ಲರ ಹೃದಯದಲ್ಲಿದ್ದಾರೆ ಎಂದು ತೋರಿಸುವ ರೀತಿಯಲ್ಲಿ ಅವರ ಫೋಟೋದ ಮುಂದೆ ಚಿತ್ರತಂಡದವರೆಲ್ಲರೂ ಸೇರಿ ಚಿತ್ರೀಕರಣದ ಕೊನೆಯ ದಿನ ಕುಂಬಳ ಕಾಯಿ ಒಡೆದು ನಮನ ಸಲ್ಲಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೂರು ತಿಂಗಳಾಗುತ್ತಾ ಬಂದರೂ ಅವರ ನೆನಪು ಅಭಿಮಾನಗಳ ಮನದಲ್ಲಿ ಕಡಿಮೆಯಾಗುತ್ತಿಲ್ಲ. ಅಪ್ಪು ನಿಧನದ ಸುದ್ದಿಯನ್ನು ಇಂದಿಗೂ ಯಾರೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರನ್ನು ನೋಡಲು ಇಂದಿಗೂ ಸಮಾಧಿ ಬಳಿ ಪ್ರತಿ ದಿನ ಸಾವಿರ ಸಾವಿರ ಮಂದಿ ಬರುತ್ತಲೇ ಇದ್ದಾರೆ.
ಜೇಮ್ಸ್ ಚಿತ್ರದ ಕೊನೆಯ ದಿನದ ಶೂಟಿಂಗ್ ಸೆಟ್ನಲ್ಲಿ ಶಿವರಾಜ್ಕುಮಾರ್ , ರಾಘವೇಂದ್ರ ರಾಜ್ಕುಮಾರ್, ರಾಘಣ್ಣ ಪುತ್ರ ಯುವ ರಾಜ್ಕುಮಾರ್, ರಾಮ್ಕುಮಾರ್ ಪುತ್ರ ಧೀರೇನ್ ಹಾಗೂ ಡಾ. ರಾಜ್ ಕುಟುಂಬದ ಕೆಲ ಆಪ್ತರು ಕೊನೆಯ ದಿನದ ಶೂಟಿಂಗ್ ಸೆಟ್ನಲ್ಲಿ ಇದ್ದರು.
ಚಿತ್ರದಲ್ಲಿ ಪುನೀತ್ ಅವರ ಧ್ವನಿಯ ಡಬ್ಬಿಂಗ್ ಕೆಲಸ ಆಗಬೇಕಿದೆ. ನಟ ಡಾ. ಶಿವರಾಜ್ ಕುಮಾರ್ ಅವರಿಂದ ಅಪ್ಪುಗೆ ಕಂಠದಾನ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ (ಮಾ.17) ‘ಜೇಮ್ಸ್’ ಬಿಡುಗಡೆಯಾಗುವ ಸಾಧ್ಯತೆಯಿದೆ.