ಜೆಡಿಎಸ್ ಮುಗಿಸಲು ಕಾಂಗ್ರೆಸ್ ನಾಯಕರ ಹುನ್ನಾರ ನಡೆಯುತ್ತಿದೆ.
ಬೆಂಗಳೂರು : ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಹಳೇ ಮೈಸೂರು ಭಾಗದ ನಮ್ಮ ಶಾಸಕರೊಬ್ಬರಿಗೆ 12 ಬಾರಿ ಕರೆ ಮಾಡಿದ ಮಾಜಿ ಸಿಎಂ ಒಬ್ಬರು, ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಮುಗಿಸಲು ಕಾಂಗ್ರೆಸ್ ನಾಯಕರಿಂದ ಹುನ್ನಾರ ನಡೆಯುತ್ತಿದೆ. ನಮ್ಮವರನ್ನು ಅವರ ಪಕ್ಷಕ್ಕೆ ಕರೆಸಿಕೊಳ್ಳಲು ಯತ್ನಿಸಲಾಗುತ್ತಿದೆ.
ನಮ್ಮ ಆತ್ಮೀಯರೊಬ್ಬರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಆದರೆ, ನಾನೇನು ತಲೆ ಕೆಡಿಸಿಕೊಳ್ಳಲ್ಲ. ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ ಎಂದಿದ್ದಾರೆ.
ಬೆಂಗಳೂರು ನಗರಕ್ಕೂ ಕೂಡ ಪ್ರತ್ಯೇಕ ಯೋಜನೆ ನೀಡಲಾಗುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಮುಂದೆ ಮುಂದಿನ ಯೋಜನೆಗಳ ಬಗ್ಗೆ ಸಂಕ್ರಾಂತಿ ವೇಳೆಗೆ ತಿಳಿಸುತ್ತೇನೆ ಎಂದರು.
ನಾವು ಹೇಳಿದ ಸೂಚನೆ ಪಾಲಿಸಬೇಕು ಅಂತಾ ಪಕ್ಷದ ಪದಾಧಿಕಾರಿಗಳಿಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲೂ ಕಾರ್ಯಕ್ರಮ ಇರಲಿವೆ. ಇನ್ಮುಂದೆ ಬೇರೆ ಜಿಲ್ಲೆಯವರನ್ನು ಇಲ್ಲಿಗೆ ಕರೆದು ಸಭೆ ಮಾಡುವುದಿಲ್ಲ. ಅಲ್ಲಿಗೆ ತೆರಳಿ ಸಭೆ ಮಾಡಲಾಗುವುದು ಎಂದು ಹೆಚ್ಡಿಕೆ ತಿಳಿಸಿದರು.