ಜೀ ಹುಜೂರ್ ನಾಯಕರಲ್ಲ ಎಂದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮನೆ ಮೇಲೆ ದಾಳಿ
ನವದೆಹಲಿ: ಪಂಜಾಬ್ ನಲ್ಲಿ ನಡೆದ ಪಕ್ಷದ ಬೆಳವಣಿಗೆ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಬಲ್ ಮನೆ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ಇದೊಂದು ಆಘಾತಕಾರಿ ಹಾಗೂ ಅಸಹ್ಯವಾದ ಘಟನೆ ಎಂದು ಆನಂದ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮದು ಜಿ.23 ವಿನಃ, ಜೀ ಹುಜೂರ್ 23 ನಾಯಕರಲ್ಲ ಎಂದು ಕಪಿಲ್ ಸಿಬಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಕ್ಷವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಕೆಲಸವನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಹಳೆಯ ಬೇಡಿಕೆಗಳನ್ನು ಪುನರುಚ್ಚರಿಸುತ್ತೇವೆ ಎಂದು ಸಿಬಲ್ ಹೇಳಿದ್ದರು.
“ಕಪಿಲ್ ಸಿಬಲ್ ಮನೆ ಮೇಲೆ ದಾಳಿ ಮತ್ತು ಗೂಂಡಾಗಿರಿ ಸುದ್ದಿಯನ್ನು ಕೇಳಿ ಆಘಾತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಬಲವಾಗಿ ಖಂಡಿಸಬೇಕಾಗಿದೆ ಎಂದು ಆನಂದ್ ಶರ್ಮಾ ಟ್ವೀಟ್ ಮೂಲಕ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ.
ಮುಕ್ತ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಎತ್ತಿಹಿಡಿದಿರುವ ಬಗ್ಗೆ ಕಾಂಗ್ರೆಸ್ ಇತಿಹಾಸವನ್ನು ಹೊಂದಿದೆ. ಭಿನ್ನಾಭಿಪ್ರಾಯ ಮತ್ತು ಗ್ರಹಿಕೆಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಅಸಹಿಷ್ಣುತೆ ಮತ್ತು ಹಿಂಸೆ ಕಾಂಗ್ರೆಸ್ ಮೌಲ್ಯ ಮತ್ತು ಸಂಸ್ಕೃತಿಗೆ ಭಿನ್ನವಾದದ್ದು. ಸಿಬಲ್ ಮನೆ ಮೇಲೆ ದಾಳಿ ನಡೆಸಿದವರನ್ನು ಗುರುತಿಸಿ, ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು, ಕಪಿಲ್ ಸಿಬಲ್ ಶೀಘ್ರವೇ ಗುಣಮುಖರಾಗಿ ಎಂಬ ಪ್ಲೇಕಾರ್ಡ್ ಪ್ರದರ್ಶಿಸಿ, ಮನೆ ಮೇಲೆ ಟೊಮೆಟೊ, ಕಲ್ಲು ತೂರಾಟ ನಡೆಸಿದ್ದರು.ಕಾರನ್ನು ಜಖಂಗೊಳಿಸಿದ್ದರು. ಅಲ್ಲದೇ ಪಕ್ಷ ಬಿಟ್ಟು ತೊಲಗಿ, ರಾಹುಲ್ ಗಾಂಧಿ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು.