ಇತ್ತೀಚಿನ ಸುದ್ದಿಸುದ್ದಿ

ಜಿಲ್ಲಾಧಿಕಾರಿ ಜೆ. ಮಂಜುನಾಥ್‌ಗೆ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ

ಬೆಂಗಳೂರು,ಆ.3. ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯದಲ್ಲಿ ಅನುಕೂಲಕರ ತೀರ್ಪು ನೀಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಬೆಂಗಳೂರು ನಗರ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಮಂಜುನಾಥ್ ಸದ್ಯಕ್ಕೆ ಹೊರಗೆ ಬರಲಾಗದು. ಇದೀಗ ಅವರು ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಬೇಕಾಗಿದೆ, ಇಲ್ಲವೇ ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಕಾಯಬೇಕಾಗುತ್ತದೆ.

ಜಾಮೀನು ಕೋರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕ ಸದಸ್ಯಪೀಠ ಬುಧವಾರ ಪ್ರಕಟಿಸಿತು.

ಎಸಿಬಿ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರರೇ ಪ್ರಮುಖ ಆರೋಪಿ, ಅವರ ಅಣತಿಯ ಮೇರೆಗೆ ಎಲ್ಲ ನಡೆದಿರುವುದು. ಅವರ ಸೂಚನೆ ಮೇರೆಗೆ ಉಪತಹಸೀಲ್ದಾರ್ ಮತ್ತು ಮತ್ತೊಬ್ಬ ಸಹಾಯಕ ಹಣ ಪಡೆದಿರುವುದು, ಅವರೇ ಮುಖ್ಯ ಸೂತ್ರದಾರರು. ಮೂಲ ದೂರುದಾರರು ಸಲ್ಲಿಸಿರುವ ಆಡಿಯೋದಲ್ಲಿ ಎಲ್ಲ ವಿವರಗಳಿವೆ ಎಂದರು. ಆದರೆ ಅರ್ಜಿದಾರರ ಪರ ವಕೀಲರು, ಎಲ್ಲ ಆರೋಪಗಳನ್ನು ನಿರಾಕರಿಸಿ. ಘಟನೆ ನಡೆದ ದಿನದಂದು ಆ ಜಾಗದಲ್ಲಿ ಅರ್ಜಿದಾರರು ಇರಲೇ ಇಲ್ಲ. ಅವರಿಗೂ ಇದಕ್ಕೂ ಸಂಬಂಧವೇ ಇಲ್ಲ. ಅನಗತ್ಯವಾಗಿ ಅವರನ್ನು ಸಿಲುಕಿಸಲಾಗುತ್ತಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಕೋರಿದರು. ಅಲ್ಲದೆ, ‘ಅಪರಾಧ ನಡೆದಿದೆ ಎಂದು ಹೇಳಲಾಗಿರುವುದು 2022ರ ಮೇ 18ರಂದು. ಆದರೆ, ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿರುವುದು 2022ರ ಮೇ 21ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 7 (ಎ) ಅನುಸಾರ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ ಅಥವಾ ನೌಕರ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಮತ್ತು ಅದನ್ನು ಪಡೆದ ಬಗ್ಗೆ ಮೇಲ್ನೋಟಕ್ಕೇ ಸಾಕಷ್ಟು ಸಾಕ್ಷ್ಯಾಧಾರಗಳಿರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಯಾವುದೇ ಬಲವಾದ ಸಾಕ್ಷ್ಯಗಳು ಇಲ್ಲ’ ಎಂದರು.

ಜೆ.ಮಂಜುನಾಥ್

‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 17ಎ ಪ್ರಕಾರ ತನಿಖಾಧಿಕಾರಿಯು ಸಾರ್ವಜನಿಕ ಸೇವಕರ ವಿರುದ್ಧದ ತನಿಖೆಗೆ ಪೂರ್ವಾನುಮತಿ ಕೋರಿರಬೇಕು. ಆದರೆ, ಈ ಪ್ರಕರಣದಲ್ಲಿ ಎಸಿಬಿ ಪೂರ್ವಾನುಮತಿ ಪಡೆದಿಲ್ಲ. ಕಂದಾಯ ವ್ಯಾಜ್ಯವನ್ನು ಇತ್ಯರ್ಥಪಡಿಸಬೇಕಾಗಿದ್ದ ಅಧಿಕಾರಿ ಮಂಜುನಾಥ್‌ ಅವರೇ ಆಗಿದ್ದ ಕಾರಣ ಅವರೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಕುರುಡಾಗಿ ಶಂಕಿಸುವುದು ತರವಲ್ಲ. ಅವರ ತೇಜೋವಧೆ ಮಾಡಲು ಮತ್ತು ಅವರ ಕಳಂಕರಹಿತ ಸೇವೆಗೆ ಮುಕ್ಕು ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ. ಆದ್ದರಿಂದ, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದರು. ‘ಅರ್ಜಿದಾರರ ವಿರುದ್ಧ ಎಸಿಬಿ ದಾಖಲಿಸಿರುವ ದೂರು ಏಕಪಕ್ಷೀಯ ಮತ್ತು ಅವರಿಗೆ ಕಿರಿಕಿರಿಯುಂಟು ಮಾಡುವ ದೂರಾಲೋಚನೆಯಿಂದ ಕೂಡಿದೆ. ದೂರನ್ನು ಪಡೆದು ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಮಂಜುನಾಥ್‌ ಅವರ ಪೂರ್ವ ಹೇಳಿಕೆ ಪಡೆದಿಲ್ಲ’ ಎಂದೂ ವಕೀಲರು ಆಕ್ಷೇಪಿಸಿದರು.

ಲಂಚ ಆರೋಪ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ಧ ಮೇಲ್ನೋಟಕ್ಕೆ ಸ್ಪಷ್ಟ ಸಾಕ್ಷ್ಯವಿದ್ದರೂ ಕ್ರಮ ಕೈಗೊಳ್ಳದ ಭ್ರಷ್ಟಚಾರ ನಿಗ್ರಹ ದಳದ ಕಾರ್ಯವನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. “ನೀವು(ಎಸಿಬಿ) ಸಣ್ಣ ಪುಟ್ಟ ಜನರನ್ನು ಹಿಡಿಯುತ್ತೀರಿ, ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಾಗೆಯೇ ಬಿಡುತ್ತೀರಿ. ಇದು ಸರಿಯೇ, ಕಾನೂನು ಎಲ್ಲರಿಗೂ ಒಂದೇ, ಯಾವುದೇ ಅಧಿಕಾರಿಯ ಮುಲಾಜಿಗೆ ಒಳಗಾಗದೆ ಕಾರ್ಯನಿರ್ವಹಿಸಬೇಕು ಎಂದು ಎಸಿಬಿ ಮತ್ತು ಅದರ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹರಿಹಾಯ್ದಿತ್ತು. ಹಾಗಾಗಿ ಕಳೆದ ಜು.4ರಂದು, ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರನ್ನು ಎಸಿಬಿ ಬಂಧಿತ್ತು. ಅಂದಿನಿಂದ ನ್ಯಾಯಾಂಗ ಬಂಧನದಲ್ಲಿರುವ ಜೆ. ಮಂಜುನಾಥ್‌ ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇತ್ತೀಚೆಗಷ್ಟೆ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹಾಗಾಗಿ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button