ಇತ್ತೀಚಿನ ಸುದ್ದಿವಿದೇಶಸುದ್ದಿ

ಜಾವೆಲಿನ್‌ ಮಿಸೈಲ್‌ಗಳ ಸಹಾಯದಿಂದ ಉಕ್ರೇನಿಯನ್‌ ಸೈನಿಕರು ಬೃಹತ್‌ ರಷ್ಯಾ ಪಡೆಗಳಿಗೆ ಭಾರೀ ಪ್ರತಿರೋಧ!

ಹೊಸದಿಲ್ಲಿ: ರಷ್ಯಾ ಆಕ್ರಮಣದಿಂದ ಉಕ್ರೇನ್‌ನ ಪರಿಸ್ಥಿತಿ ಭೀಕರವಾಗಿದೆ. ಆದರೆ, ರಷ್ಯಾ ಸೈನಿಕರಿಗೆ ಅಮೆರಿಕ ನಿರ್ಮಿತ ಜಾವೆಲಿನ್‌ ಮಿಸೈಲ್‌ಗಳು ಸಿಂಹಸ್ವಪ್ನವಾಗಿವೆ. ಹೌದು, ಅಮೆರಿಕ ಪೂರೈಸಿರುವ ಮಿಸೈಲ್‌ಗಳ ಸಹಾಯದಿಂದ ಉಕ್ರೇನಿಯನ್‌ ಸೈನಿಕರು ಬೃಹತ್‌ ರಷ್ಯಾ ಪಡೆಗಳಿಗೆ ಭಾರೀ ಪ್ರತಿರೋಧ ತೋರುತ್ತಿದ್ದಾರೆ. ರಷ್ಯಾದ ನೂರಾರು ಯುದ್ಧ ಟ್ಯಾಂಕರ್‌ಗಳನ್ನು, ಸೇನಾ ವಾಹನಗಳನ್ನು ಹಸ್ತ ಚಾಲಿತ ಟ್ಯಾಂಕರ್‌ ನಿರೋಧಕ ಕ್ಷಿಪಣಿಗಳಿಂದ ನಾಶಪಡಿಸುತ್ತಿದ್ದಾರೆ.

ಕನಿಷ್ಠ 280 ರಷ್ಯಾ ಸೇನಾ ವಾಹನಗಳನ್ನು ಅಮೆರಿಕದ ಜಾವೆಲಿನ್‌ ಮಿಸೈಲ್‌ಗಳಿಂದ ಉಕ್ರೇನಿಯನ್‌ ಸೈನಿಕರು ನಾಶಪಡಿಸಿದ್ದಾರೆ. 280 ಸೇನಾ ವಾಹನಗಳ ನಾಶಕ್ಕೆ ಉಕ್ರೇನ್‌ ಸೈನಿಕರು ಕೇವಲ 300 ಬಾರಿ ಕ್ಷಿಪಣಿ ಉಡಾಯಿಸಿದ್ದಾರೆ. ಅಂದರೆ, ಜಾವೆಲಿನ್‌ ಕ್ಷಿಪಣಿಗಳು ಶೇ.93ರಷ್ಟು ಯಶಸ್ವಿ ಪ್ರಮಾಣ ಹೊಂದಿದ್ದು, ಉಕ್ರೇನ್‌ ಸೈನಿಕರಿಗೆ ವರವಾಗಿವೆ.

ಜಾವೆಲಿನ್‌ ಮಿಸೈಲ್‌ಗಳನ್ನು ರೇಥಿಯೋನ್‌ ಮಿಸೈಲ್ಸ್‌ ಮತ್ತು ಡಿಫೆನ್ಸ್‌ ಹಾಗೂ ಲಾಕ್‌ಹೀಡ್‌ ಮಾರ್ಟಿನ್‌ ಅವರಿಂದ ಜಂಟಿಯಾಗಿ ನಿರ್ಮಿಸಲಾಗಿದೆ. ಸೇನಾ ವಾಹನಗಳು ದುರ್ಬಲ ಇರುವ ಕಡೆ ಜಾವೆಲಿನ್‌ ಮಿಸೈಲ್‌ಗಳು ದಾಳಿ ಮಾಡಿ ನಾಶಪಡಿಸುತ್ತವೆ. ಯುದ್ಧ ಟ್ಯಾಂಕರ್‌ಗಳು ಎರಡು ಬದಿಗಳು ಹೆಚ್ಚು ಪ್ರಬಲವಾಗಿದ್ದು, ಮೇಲಿನಿಂದ ದುರ್ಬಲವಾಗಿರುತ್ತವೆ. ಅದನ್ನೇ ಗುರಿಯಾಗಿಟ್ಟುಕೊಂಡು ಈ ಜಾವೆಲಿನ್‌ ಮಿಸೈಲ್‌ಗಳು ದಾಳಿ ನಡೆಸಿ ಯುದ್ಧ ಟ್ಯಾಂಕರ್‌ಗಳನ್ನು ನಾಶಪಡಿಸುತ್ತವೆ.

ಜಾವೆಲಿನ್‌ ಮಿಸೈಲ್‌ಗಳ ಮೊದಲ ತಂಡ 2018ರಲ್ಲಿ ಉಕ್ರೇನ್‌ಗೆ ಬಂದಿದೆ. ಅಮೆರಿಕ ಕೇವಲ ಮಿಸೈಲ್‌ಗಳನ್ನು ಮಾತ್ರ ನೀಡದೇ ಉಕ್ರೇನ್‌ ಸೈನಿಕರಿಗೆ ಬೇಕಾಗುವ ತರಬೇತಿಯನ್ನು ಕೂಡ ನೀಡಿತ್ತು. ಇದಕ್ಕಾಗಿ ಉಕ್ರೇನ್‌ 75 ಮಿಲಿಯನ್‌ ಡಾಲರ್‌ ವ್ಯಯಿಸಿತ್ತು.

ಉಕ್ರೇನ್‌ ಈಗ ಅಮೆರಿಕದ ಜಾವೆಲಿನ್‌ ಕ್ಷಿಪಣಿಗಳನ್ನು ಹೊಂದಿದೆ ಎಂಬುದು ರಷ್ಯಾಗೆ ಗೊತ್ತಾಗಿದೆ. ಆದ್ದರಿಂದ ರಷ್ಯಾದ ಕಡಿಮೆ ಆಕ್ರಮಣಕಾರಿಯಾಗಿರುವ ಟಿ-72 ಯುದ್ಧ ಟ್ಯಾಂಕರ್‌ಗಳು ಯುದ್ಧಭೂಮಿಯಿಂದ ಮತ್ತಷ್ಟು ಹಿಂದೆ ಸರಿದಿವೆ ಎಂದು ಅಮೆರಿಕದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಬ್ಬ ಸೈನಿಕನು ಜಾವೆಲಿನ್ ಅನ್ನು ತೆಗೆದುಕೊಂಡು ಹೋಗಬಹುದು ಮತ್ತು ನಿರ್ವಹಿಸಬಹುದಾಗಿದೆ. ಆದರೆ, ಹೆಚ್ಚುವರಿ ಉಡಾವಣಾ ಟ್ಯೂಬ್‌ಗಳನ್ನು ಸಾಗಿಸಲು ಹೆಚ್ಚಿನ ಸೈನಿಕರು ಬೇಕಾಗುತ್ತಾರೆ.

ರಷ್ಯಾದ ಶಸ್ತ್ರಸಜ್ಜಿತ ಪಡೆಗಳು ಉಕ್ರೇನ್‌ನಲ್ಲಿ ನಗರ ಪ್ರದೇಶಗಳನ್ನು ಪ್ರವೇಶಿಸಿದಾಗ ರಷ್ಯಾ ಟ್ಯಾಂಕರ್‌ಗಳು ಉಕ್ರೇನ್‌ ಸೈನಿಕರ ಜಾವೆಲಿನ್‌ ಮಿಸೈಲ್‌ಗಳ ಹೊಡೆತಕ್ಕೆ ನಲುಗಿವೆ. ಜಾವೆಲಿನ್‌ಗಳನ್ನು ಹೊಂದಿದ್ದ ಉಕ್ರೇನಿಯನ್ ಪಡೆಗಳು ಅಡಗಿಕೊಂಡು, ವೇಗವಾಗಿ ಚಲಿಸಿ ರಷ್ಯಾ ಪಡೆಗಳ ಮೇಲೆ ದಾಳಿ ನಡೆಸುತ್ತಿವೆ. ರಷ್ಯನ್ನರ ಬೃಹತ್‌ ಸೇನೆಯ ಎದುರು ನೇರವಾಗಿ ಹೋರಾಟ ಮಾಡುವಷ್ಟು ಸೈನ್ಯ ಉಕ್ರೇನ್‌ ಬಳಿ ಇಲ್ಲದಿರುವುದರಿಂದ ಉಕ್ರೇನಿಯನ್‌ ಸೈನಿಕರಿಗೆ ಜಾವೆಲಿನ್‌ ಕ್ಷಿಪಣಿಗಳು ವರವಾಗಿವೆ.

ಜಾವೆಲಿನ್ ಮಿಸೈಲ್‌ ಅಥವಾ ಇತರ ಆಯುಧಗಳಿಂದ ಉಕ್ರೇನಿಯನ್ ಸೈನಿಕರು ನಾಶಪಡಿಸಿದ ಟ್ಯಾಂಕರ್‌ಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂಖ್ಯೆಗಳು ಭಾರೀ ಹೆಚ್ಚಿದ್ದು, ವಾಸ್ತವಕ್ಕೆ ಹತ್ತಿರವಿರುವುದಿಲ್ಲ. ಏಕೆಂದರೆ ಉಕ್ರೇನಿಯನ್ನರು ಹೆಚ್ಚಿನ ಸಂಖ್ಯೆ ನೀಡಿದರೆ, ರಷ್ಯನ್ನರು ಕಡಿಮೆ ಸಂಖ್ಯೆಯನ್ನು ನೀಡುತ್ತಿದ್ದಾರೆ ಎಂದು ಅಮೆರಿಕದ ಪತ್ರಕರ್ತ ಮರ್ಫಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button