ಜಾತಿ ಭೇದ ಧಿಕ್ಕರಿಸಿ ಪಂಕ್ತಿ ಭೋಜನ ಸೇವೆ ಸಾರಿದ್ದ ಸಿದ್ದಪ್ಪಾಜಿ: 5 ಜಿಲ್ಲೆಗಳ ಲಕ್ಷಾಂತರ ಭಕ್ತರು ಬಂದು ಸೇವೆ ನಡೆಸಿದರು
ಅದು 8 ಶತಮಾನಗಳ ಹಿಂದೆ ಸಮಾನತೆ ಸಾರಿದ ಮಹಾಪುರುಷರ ಐತಿಹಾಸಿಕ ಜಾತ್ರೆ. ಸಮಾಜದಲ್ಲಿ ಇದ್ದ ಮೇಲು ಕೀಳು, ಆಹಾರ ಪದ್ದತಿಯ ತಾರಮ್ಯದ ವಿರುದ್ಧ ಸಿಡಿದೆದ್ದು ಪಂಕ್ತಿ ಭೋಜನದ ಮೂಲಕ ನಾವೆಲ್ಲರೂ ಮನುಷ್ಯರು ಎಂದು ಸಂತರು ಸಾರಿ ಹೇಳಿದ್ದರು. ಈ ಪಂಕ್ತಿ ಸೇವೆಯಲ್ಲಿ ಮಾಂಸಾಹಾರ, ಸಸ್ಯಾಹಾರದ ಭೋಜನ ತಯಾರಿಸಿ ಎಲ್ಲರೂ ಒಟ್ಟಿಗೆ ಊಟ ಮಾಡ್ತಿದ್ದರು. ಆದ್ರೆ ಕೋರ್ಟ್ ಆದೇಶದನ್ವಯ ಚಿಕ್ಕಲ್ಲೂರಿನಲ್ಲಿ ಪ್ರಾಣಿ ವಧೆ ನಡೆಸಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇದೆಲ್ಲದರ ನಡುವೆ ಇದೀಗ ಪಂಕ್ತಿ ಸೇವೆ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಸಿದ್ದಾಪ್ಪಾಜಿ ಜಾತ್ರೆ ಪ್ರತಿ ವರ್ಷ ಮೊದಲನೇ ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ. ಜಾನಪದ ಗ್ರಂಥಗಳ ದಾಖಲೆ ಪ್ರಕಾರ 8 ಶತಮಾನಗಳಿಂದ ಜಾತ್ರೆ ನಡೆಯುತ್ತಾ ಬಂದಿದೆ. ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಹಾಗು ಬೆಂಗಳೂರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
ಬಂದ ಭಕ್ತರು ದೇವಾಲಯದ ಆವರಣ ಇಲ್ಲವೇ ಸುತ್ತಮುತ್ತಲ ಖಾಸಗಿ ಜಾಗದಲ್ಲಿ ಬಿಡಾರ ಹೂಡಿ ವಾಸವಾಗಿರುತ್ತಾರೆ. ಬಿಡಾರ ಹೂಡಿದಾಗಿನಿಂದ ಅಲ್ಲಿ ಪವಾಡ ಪುರುಷ ಸಿದ್ದಾಪ್ಪಾಜಿಯ ಕಂಡಾಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸುಗ್ಗಿಯ ನಂತರ ಬರುವ ಈ ಜಾತ್ರೆಗೆ ಈ ಭಾಗದ ಜನರು ಸಡಗರ ಸಂಭ್ರದಿಂದ ಪಾಲ್ಗೊಳ್ಳುತ್ತಾರೆ.
ಜಾತ್ರೆಯ ಆಕರ್ಷಣೀಯವಾಗಿದ್ದು, ಹೆಚ್ಚು ಪ್ರಸಿದ್ದಿ ಪಡೆದಿದ್ದು ಅಂದ್ರೆ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆ. ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನ ಬಲಿ ಕೊಡುತ್ತಾರೆ. ಪಂಕ್ತಿ ಸೇವೆಗೆ ಪ್ರಾಣಿ ಬಲಿ ಕೊಡಲಾಗುತ್ತಿದೆ ಎಂದು ಪ್ರಾಣಿ ದಯಾ ಕಲ್ಯಾಣ ಸಮಿತಿ ಆರೋಪಿಸಿ ನ್ಯಾಯಾಲದ ಮೆಟ್ಟಿಲು ಹತ್ತಿತ್ತು. ನಂತ್ರ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಭಕ್ತರಿಗೆ ಪಂಕ್ತಿ ಸೇವೆಗೆ ಅಡಚಣೆ ಮಾಡದೇ ಕರ್ನಾಟಕ ಪ್ರಾಣಿ ಬಲಿ ಕಾಯ್ದೆ ಉಲ್ಲಂಘನೆ ಮಾಡದಂತೆ ಆದೇಶ ನೀಡಿತ್ತು.ಇದ್ರಿಂದ ಪ್ರಾಣಿ ವಧೆ ನಿಷೇಧ ಮಾಡಲಾಗಿದೆ.
ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯ ವಿಶೇಷ ಅಂದ್ರೆ ಭಾಗವಹಿಸುವವರೆಲ್ಲ ಬಹುತೇಕ ರೈತರೇ. 12ನೇ ಶತಮಾನದಲ್ಲಿ ಜಾತಿ ಪದ್ದತಿ, ಪಂಕ್ತಿ ಸೇವೆ ತಾರತಮ್ಯಗಳ ವಿರುದ್ಧ ಹೋರಾಟ ಮಾಡಿದ ರಾಚಪ್ಪಜೀ ಅವರು ಉತ್ತರದಿಂದ ದಕ್ಷಿಣಾಭಿಮುಕವಾಗಿ ಬಂದರು. ಅವರ ಶಿಷ್ಯರೇ ನೀಲಗಾರ ಸಿದ್ದಪ್ಪಾಜಿ. ಜಾತಿ ಭೇದ ಧಿಕ್ಕರಿಸಿ ಎಲ್ಲರೂ ಸಹಪಂಕ್ತಿಯಲ್ಲಿ ಊಟ ಮಾಡಬೇಕು ಎಂಬ ಕಲ್ಪನೆಯೊಂದಿಗೆ ಚಿಕ್ಕಲ್ಲೂರಿನಲ್ಲಿ ನೆಲೆಸಿದರು.
ಅವರ ಐಕ್ಯವಾದ ನಂತರ ವರ್ಷದ ಮೊದಲ ಹುಣ್ಣಿಮೆ ದಿನದಿಂದ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ.ಆದ್ರೆ ಭಕ್ತರು ತರುವ ಕುರಿ,ಕೋಳಿಗಳನ್ನು ತೆಗೆದುಕೊಂಡು ಹೋಗದಂತೆ ಪೊಲೀಸರು ಹದ್ದಿನಕಣ್ಣಿಟ್ಟು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದರು. ಆದ್ರು ಕೂಡ ಕದ್ದುಮುಚ್ಚಿ ಕುರಿ,ಕೋಳಿ ಕೊಯ್ದು ಮಾಂಸಾಹಾರ ತಯಾರಿಸಿ ಖಂಡಾಯಕ್ಕೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಮದ್ಯ,ಮಾಂಸಾಹಾರ,ಭಂಗಿ ಸೊಪ್ಪಿನ ನೈವೇದ್ಯ ಕೂಡ ಇಡ್ತಾರೆ.
ಒಟ್ಟಾರೆ ಗೊಂದಲ ಜಿಜ್ಞಾಸೆ ನಡುವೆ ನಡುವೆಯೇ ಚಿಕ್ಕಲ್ಲೂರಿನಲ್ಲಿ ಪಂಕ್ತಿ ಸೇವೆ ನಡೆದಿದೆ.ಮುಂದಿನ ಬಾರಿ ಸರ್ಕಾರ ಪಂಕ್ತಿ ಸೇವೆಗೆ ಮಾಂಸಾಹಾರ ಭೋಜನಕ್ಕೆ ಅವಕಾಶ ಕೊಡಲಿ,ನಾವೂ ಪ್ರಾಣಿ ಬಲಿ ಕೊಡಲ್ಲ,ಹರಕೆ ತೀರಿಸುವ ಕೆಲಸ ಮಾಡ್ತೀವಿ,ಜನರ ಆಚಾರ ವಿಚಾರಕ್ಕೂ ಮಣೆ ಹಾಕುವಂತೆ ಮನವಿ ಮಾಡ್ತಿದ್ದಾರೆ.