ಜರ್ಮನಿ ರಾಜಧಾನಿ ಬರ್ಲಿನ್‌ಗೆ ಪ್ರಥಮ ಮಹಿಳಾ ಮೇಯರ್
ಬರ್ಲಿನ್ (ರಾಯಿಟರ್ಸ್): ಜರ್ಮನಿಯ ರಾಜಧಾನಿ ಬರ್ಲಿನ್ ನಗರದ ಮೇಯರ್ ಆಗಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧಿಕಾರ ಸ್ವೀಕರಿಸಲಿದ್ದಾರೆ.
ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಸೋಷಿಯಲ್ ಡೆಮಾಕ್ರಾಟ್ಸ್ (ಎಸ್‌ಪಿಡಿ) ಮುನ್ನಡೆ ಸಾಧಿಸಿದ್ದು, ಈ ಪಕ್ಷದ ಅಭ್ಯರ್ಥಿ, 43 ವರ್ಷದ ಫ್ರಾಂಜಿಸ್ಕಾ ಗಿಫೆ ಅವರು ಮೇಯರ್ ಆಗುವುದು ಖಚಿತವಾಗಿದೆ.
ಗಿಫೆ ಅವರು ಅಂಗೆಲಾ ಮೆರ್ಕೆಲ್ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿದ್ದರು. ಈಗ ಎಸ್‌ಪಿಡಿಯ ಮೈಕೆಲ್ ಮ್ಯುಲ್ಲರ್ ಅವರಿಂದ ನಗರದ ಮೊದಲ ಮೇಯರ್ ಆಗಿ ಅಧಿಕಾರದ ಚುಕ್ಕಾಣಿ ಸ್ವೀಕರಿಸಲಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಎಸ್‌ಪಿಡಿ ಮುಂಚೂಣಿ ನಾಯಕಿಯಾಗಿ ಹೊರಹೊಮ್ಮಿದ್ದ ಗಿಫೆ ತಮ್ಮ ಪಿಎಚ್.ಡಿ ಅಧ್ಯಯನವು ಕೃತಿಚೌರ್ಯ ಎಂದು ವಿವಾದಕ್ಕೆಡೆಯಾದ ಬಳಿಕ ಮೇ ತಿಂಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಎಸ್‌ಪಿಡಿ ಶೇ 21.4ರಷ್ಟು ಮತಗಳಿಸಿದ್ದು, ಇದು 2016ರಲ್ಲಿ ಗಳಿಸಿದ್ದ ಶೇ 21.6ಕ್ಕಿಂತ ಕಡಿಮೆಯಾಗಿದೆ. ವಿರೋಧಪಕ್ಷ ಗ್ರೀನ್ಸ್ ಶೇ 18.9ರಷ್ಟು ಮತಗಳಿಸಿದ್ದು, ಈ ಹಿಂದೆ ಶೇ 15.2ರಷ್ಟು ಅಂಕಗಳಿಸಿತ್ತು. ಲಿಂಕೆ ಪಕ್ಷದ ಮತಗಳಿಕೆ ಪ್ರಮಾಣ ಕುಗ್ಗಿದೆ. ಈಗ ಶೇ 14ರಷ್ಟು ಮತಗಳಿಸಿದ್ದು, ಹಿಂದಿನ ಬಾರಿ ಶೇ 15.5ರಷ್ಟು ಇತ್ತು.