ಇತ್ತೀಚಿನ ಸುದ್ದಿರಾಜ್ಯಸುದ್ದಿ

ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್‌, ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರ ಪಟ್ಟು, ಎಷ್ಟು ಏರಿಕೆ?

ಬೆಂಗಳೂರು: ಬಿಎಂಟಿಸಿ ಬಸ್‌ ದರ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಇದೀಗ ಆಟೋ ದರ ಪರಿಷ್ಕರಿಸುವಂತೆ ಆಟೋ ಚಾಲಕರು ಜಿಲ್ಲಾಡಳಿತದ ಮುಂದೆ ಬೇಡಿಕೆ ಮುಂದಿಟ್ಟಿದ್ದಾರೆ. ಇದರಿಂದ ಸದ್ಯದಲ್ಲೇ ಆಟೋ ಪ್ರಯಾಣ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ.ಈ ಸಂಬಂಧ ಸರಕಾರ ರಚಿಸಿದ ಸಮಿತಿಯು ಇದೇ ಮಾರ್ಚ್‌ 12ರಂದು ನಗರದ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದು, ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಆಟೋ ರಿಕ್ಷಾ ಸಂಘ – ಸಂಸ್ಥೆಗಳಿಂದ ಒಬ್ಬರು ಅಥವಾ ಇಬ್ಬರು ಪ್ರತಿನಿಗಳನ್ನು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.ಪ್ರಸ್ತುತ ಪ್ರತಿ ಕಿ.ಮೀ.ಗೆ 15 ರೂ. ಇರುವ ಆಟೋ ಪ್ರಯಾಣ ದರವನ್ನು 18 ರೂ.ಗೆ ನಿಗದಿಪಡಿಸಬೇಕು ಹಾಗೂ 30 ರೂ. ಇರುವ ಕನಿಷ್ಠ ಬಾಡಿಗೆ ದರವನ್ನು 36 ರೂ.ಗೆ ಹೆಚ್ಚಿಸಬೇಕು ಎಂಬುದು ಆಟೋ ಚಾಲಕರ ಅಂದಾಜು ಬೇಡಿಕೆಯಾಗಿದೆ. ಅಂತಿಮವಾಗಿ ಆಟೋ ಪ್ರಯಾಣ ದರ ಯಾವ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ.ಬಸ್‌ ದರ, ನಮ್ಮ ಮೆಟ್ರೋ ದರ ಏರಿಕೆಯ ಬೆನ್ನಲ್ಲೇ ಜನಸಾಮಾನ್ಯರು ಬಳಸುವ ಸಣ್ಣ – ಪುಟ್ಟ ವಸ್ತುಗಳ ಬೆಲೆಯೂ ಏರಿಕೆಯಾಗಿರುವ ಜತೆಗೆ ಆಟೋ ಓಡಿಸಲು ಅಗತ್ಯವಾದ ಪೆಟ್ರೋಲ್‌, ಡೀಸೆಲ್‌, ಅನಿಲ ದರವೂ ಏರಿಕೆಯಾಗುತ್ತಿದೆ. ಬೆಲೆ ಏರಿಕೆ ನಡುವೆ ಹಳೆ ದರದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಪರಿಣಾಮ, ಆಟೋ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹಲವು ಆಟೋ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್‌ ಮಾತನಾಡಿ, “ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸೇರಿದಂತೆ ದಿನನಿತ್ಯ ಉಪಯೋಗಿಸುವ ಎಲ್ಲಾ ರೀತಿಯ ವಸ್ತುಗಳ ದರಗಳು ಏರಿಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದರ ಏರಿಕೆ ಮಾಡದೆ ಆಟೋಗಳು ನಷ್ಟದಲ್ಲಿಯೇ ಸಾಗುತ್ತಿವೆ. ಆದ ಕಾರಣ ಅನಿವಾರ್ಯವಾಗಿ ದರ ಏರಿಕೆಗೆ ಬೇಡಿಕೆ ಮುಂದಿಡಲಾಗಿದೆ,” ಎಂದರು.ಆಟೋ ದರ ಏರಿಕೆ ಬಗ್ಗೆ ಸರಕಾರ ರಚಿಸಿದ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ನೋಡಬೇಕಿದೆ. ಒಂದೊಮ್ಮೆ ಆಟೋ ದರ ಏರಿಕೆ ಆದಲ್ಲಿ, ಪ್ರಯಾಣಿಕರ ಜೇಬಿಗೆ ಮತ್ತೊಂದು ಹೊರೆ ಬೀಳುವುದು ಖಚಿತವಾಗಲಿದೆ.


Related Articles

Leave a Reply

Your email address will not be published. Required fields are marked *

Back to top button