: ಜಗಳ ಮಾಡಲು ಜೊತೆ ಬರದಿದ್ದಕ್ಕೆ ಕೊಲೆ; ಪತ್ನಿ ಹತ್ಯೆ, ಅತ್ತೆ ಮೇಲೂ ಡೆಡ್ಲಿ ಅಟ್ಯಾಕ್!
ಮುಂಬೈ: ಪ್ರಪಂಚದಲ್ಲಿ ಚಿತ್ರ-ವಿಚಿತ್ರ ರೀತಿಯ ಮನಸ್ಥಿತಿಯುಳ್ಳ ಮನುಷ್ಯರಿದ್ದಾರೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಆಸೆಪಟ್ಟು ಮತ್ತೊಬ್ಬರ ಕತೆ ಮುಗಿಸಿ, ತಮ್ಮ ಜೀವನದಲ್ಲಿ ಹೊಸ ಕಥೆಯನ್ನು ಪ್ರಯತ್ನಿಸಿ ಜೈಲು ಪಾಲಾಗಿದ್ದಾರೆ. ಆಸ್ತಿಗಾಗಿ ಕೊಲೆ, ಹಣಕ್ಕಾಗಿ ಕೊಲೆ, ಹೆಣ್ಣಿಗಾಗಿ ಕೊಲೆ ಆಗಿರೋದನ್ನ ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಮುಂಬೈನಲ್ಲಿ (Mumbai) ಒಬ್ಬ ವಿಚಿತ್ರ ಪತಿರಾಯ ಸಣ್ಣ ವಿಚಾರಕ್ಕೆ ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ. (Husband Killed wife) ಇಷ್ಟಕ್ಕೆ ನಿಲ್ಲದ ಇವನ ಹುಚ್ಚುತನ ತನ್ನ ಅತ್ತೆಯ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾನೆ. ನೆರೆ ಮನೆಯವರೊಂದಿಗೆ ಜಗಳ ಮಾಡಲು ಸಾಥ್ ನೀಡಲಿಲ್ಲ (fight) ಎಂದು ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಆಕೆಯ ಎದೆಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮುಂಬೈ ನಗರದ ವಿರಾರ್ ( ಪೂರ್ವ)(VIRRAR) ನಲ್ಲಿ ದುರ್ಘಟನೆ ನಡೆದಿದೆ. ಜಗದೀಶ್ ಗೌರವ್ ಈ ಕೃತ್ಯ ಎಸಗಿದ್ದು, ಸದ್ಯಕ್ಕೆ ಪರಾರಿಯಾಗಿದ್ದಾನೆ. ಈತನಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯು ರೈಲು ಟಿಕೆಟ್ ಮಾರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಸುಪ್ರಿಯಾ(Supriya) ಹಾಗೂ ಈತನಿಗೆ ಮೂರು ಮಕ್ಕಳು. ಈತನ ಮಾವ ತೀರಿಹೋದ ನಂತರ ತನ್ನ ಅತ್ತೆ ಸುಷ್ಮಾ ಶೆಟ್ಟಿ (Sushma Shetty)ಯವರ ಜೊತೆ ಫ್ಲ್ಯಾಟ್ ವೊಂದಲ್ಲಿ ವಾಸವಿದ್ದ. ಹೆಂಡತಿ, ಅತ್ತೆ ಮಕ್ಕಳು ಸುಖವಾಗಿ ಸಂಸಾರ ನಡೆಸುತ್ತಿದ್ದರು. ಭಾನುವಾರ ರಾತ್ರಿ ಪಕ್ಕದ ಫ್ಲಾಟ್ ನವರು ಬಟ್ಟೆ ಒಣಗಿಸುವ ವಿಚಾರಕ್ಕೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಜಗಳ ಮಾಡುವುದಕ್ಕೆ ಹೆಂಡತಿ-ಅತ್ತೆಯನ್ನು ಕರೆದ
ಇಷ್ಟಕ್ಕೆ ಕುಪಿತಗೊಂಡ ಜಗದೀಶ್ ನೆರೆಮನೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ. ಬಳಿಕ ಮನೆಯೊಳಗೆ ಇದ್ದ ಪತ್ನಿ ಹಾಗೂ ಅತ್ತೆಯನ್ನು ತನ್ನ ಜಗಳಕ್ಕೆ ಸಾಥ್ ನೀಡುವಂತೆ ಕೇಳಿಕೊಂಡಿದ್ದಾನೆ. ಪತ್ನಿ ಸುಪ್ರಿಯಾ ಮನೆಗೆಲಸದಲ್ಲಿ ತೊಡಗಿಕೊಂಡಿದ್ದರಿಂದ, ಯಾಕೆ ಜಗಳ ಮಾಡುತ್ತೀರ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಅತ್ತೆ ಸುಷ್ಮಾ ಶೆಟ್ಟಿಯೂ ಕೂಡ ಸಣ್ಣ ವಿಚಾರಕ್ಕೆ ಜಗಳ ಯಾಕೆ ಬಿಟ್ಟುಬಿಡಿ ಎಂದು ಹೇಳಿದ್ದರಂತೆ. ಇವರ ಮಾತನ್ನು ಕೇಳಿ ಸುಮ್ಮನಾಗಿದ್ದ ಜಗದೀಶ್, ಕೆಲ ನಿಮಿಷಗಳ ಬಳಿಕ ಹೆಂಡತಿ ಹಾಗೂ ಅತ್ತೆಗೆ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದನಂತೆ. ಇದನ್ನು ಕೇಳಲು ಬಂದ ಅತ್ತೆಯ ತಲೆಯನ್ನ ಗೋಡೆಗೆ ಜಗದೀಶ್ ಜಜ್ಜಿದ್ದಾನೆ. ಇದನ್ನು ತಡೆಯಲು ಬಂದ ಪತ್ನಿಯ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಅತ್ತೆಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳಕ್ಕೆ ಬಂದ ನೆರೆಮನೆಯವರು ತಾಯಿ ಮಗಳನ್ನು ಸ್ಥಳೀಯ ಸಿದ್ಧಿವಿನಾಯಕ ಆಸ್ಪತ್ರೆಗೆ ಕರೆತಂದಿದ್ದರು. ತಾಯಿ-ಮಗಳ ಸ್ಥಿತಿ ಕ್ರಿಟಿಕಲ್ ಆಗಿದ್ದರಿಂದ ಆಸ್ಪತ್ರೆಯಿಂದ ಸಂಜೀವಿನಿ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಾಗಲೇ ಮಗಳು ಸುಪ್ರಿಯಾ ಪ್ರಾಣಪಕ್ಷಿ ಹಾರಿಹೋಗಿತ್ತು. ತಾಯಿ ಸುಷ್ಮಾ ಶೆಟ್ಟಿ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಅಂತ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಇನ್ನು ಆರೋಪಿಗಾಗಿ ಪೊಲೀಸರು ಈಗಾಗಲೇ ಶೋಧ ಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲಿ ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಣ್ಣ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಪರ ಜಗಳ ಮಾಡಲು ಹೆಂಡತಿ, ಅತ್ತೆ ಬರದಿದ್ದಕ್ಕೆ, ಈ ರೀತಿ ಕೊಲೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿ.